ಬೆಂಗಳೂರು: ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಲೇಬೇಕು. ಸುಪ್ರೀಂ ಕೋರ್ಟ್ ತೀರ್ಪು ಕುರಿತು ನಮ್ಮ ವಕೀಲರನ್ನು ಸಂಪರ್ಕಿಸಿ ಮುಂದೆ ಯಾವ ರೀತಿಯ ಹೆಜ್ಜೆ ಇಡಬೇಕು ಎನ್ನುವ ನಿರ್ಧಾರ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಿನ್ನಡೆಯಾದಂತಾಗಿದೆ ಎಂದುಕೊಳ್ಳಬೇಕಿಲ್ಲ. ರಾಜಕಾರಣದಲ್ಲಿ ಹಿನ್ನಡೆ-ಮುನ್ನಡೆ ಆಗುತ್ತಿರುತ್ತದೆ. ಎಷ್ಟೋ ಮುಖ್ಯಮಂತ್ರಿಗಳ ವಿರುದ್ಧ ಕೋರ್ಟ್ಗಳ ತೀರ್ಪು ಬಂದಿವೆ ಎಂದರು.
ಸಚಿವ ಸ್ಥಾನದ ಆಸೆ ಪಟ್ಟು ಸಮ್ಮಿಶ್ರ ಸರ್ಕಾರದ ದಮನ ನೀತಿಗೆ ಕೈ ಜೋಡಿಸಲಿಲ್ಲ, ಮಂತ್ರಿ ಸ್ಥಾನದ ಸಲುವಾಗಿ ಬಿಜೆಪಿಗೆ ಬರಲಿಲ್ಲ. ನಮ್ಮ ಪಕ್ಷದ ನಾಯಕರ ವಿರುದ್ಧ ದಂಗೆ ಎದ್ದು ಬಂದಿದ್ದೇವೆ. ದಂಗೆ ಫಲಪ್ರದವೂ ಆಯಿತು. ಆದರೆ ದಂಗೆಯ ಫಲದಿಂದ ಯಾರು ಊಟ ಮಾಡಲು ಕುಳಿತರೋ ಅವರೇ ನನ್ನನ್ನು ಕೊಲ್ಲುವಂತಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಹೌ ಟು ಫಿನಿಷ್ ವಿಶ್ವನಾಥ್ ಎಂಬ ಸ್ಕೀಂ ಶುರುವಾಗಿದ್ದೇ ದೆಹಲಿಯಲ್ಲಿ. ನನಗೆ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಅವಕಾಶವನ್ನು ತಪ್ಪಿಸಿದ್ದ ಕ್ಷಣದಿಂದ ಇದು ಶುರುವಾಯ್ತು. ಕೋರ್ ಕಮಿಟಿ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ನನ್ನ ಹೆಸರು ಇದ್ದರೂ ದೆಹಲಿಯಲ್ಲಿ ನನ್ನ ಹೆಸರು ತಪ್ಪಿಸಿದರು.
ಯಾರನ್ನೂ ಒದ್ದು ಬಂದಿದ್ದೆವೋ ಅವರ ಜೊತೆಯೇ ಕೈ ಜೋಡಿಸಿದರು. ಯಡಿಯೂರಪ್ಪ ಮಾತು ತಪ್ಪಿದ ನಾಯಕನೋ ಇಲ್ಲವೋ ಅನ್ನೋದನ್ನು ನೀವೇ ಆವಲೋಕನ ಮಾಡಿ ಎಂದು ಸಿಎಂ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ನಿಮಗೆ ಸಚಿವರಾಗಲು ಕಾನೂನು ಮಾನ್ಯತೆ ಇಲ್ಲ: ಹೆಚ್ ವಿಶ್ವನಾಥ್ಗೆ ಶಾಕ್ ಕೊಟ್ಟ ಸುಪ್ರೀಂ