ಬೆಂಗಳೂರು: ಕೋವಿಡ್-19 ರಾಜ್ಯವನ್ನ ಸಂಪೂರ್ಣ ತಲ್ಲಣಗೊಳಿಸಿದೆ. ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಜನರ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಟೆಸ್ಟ್ ಮಾಡಿಸುವ ಬಗ್ಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ. ಸಿಎಂಗೆ ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ 40 ಸಾವಿರಕ್ಕೂ ಹೆಚ್ಚು ರಿಸಲ್ಟ್ ವೇಯ್ಟಿಂಗ್ ಇದೆ. ಇದಕ್ಕೆ ನಾವು ಏನನ್ನಬೇಕು? ಯಾವ ಚಾಟಿ ಬೀಸಬೇಕು? ನಾವು ಟೀಕೆ, ವಿಮರ್ಶೆ ಮಾಡುವುದು ಬೇರೆ. ಬೌದ್ಧಿಕ ದಿವಾಳಿತನ ಜನರಿಗೆ ಆಘಾತವನ್ನುಂಟುಮಾಡಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಮುಂದೆ ಇನ್ನಷ್ಟು ಭೀಕರ:
ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆಯವರು ಬೆಡ್ ಕೊರತೆ ಅಂತ ಹೇಳ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಅಂತಾರೆ. ನಾವು ಮೊದಲೇ ಸಾಕಷ್ಟು ಸಲಹೆಗಳನ್ನ ನೀಡಿದ್ದೆವು. ಹಾಸ್ಟಲ್, ಹೋಟೆಲ್ ವಶಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೆವು. ಆದರೆ ಇಂದಿಗೂ ಏನೂ ಆಗಿಲ್ಲ. ಬೀದಿ ಬೀದಿಗಳಲ್ಲಿ ಜನ ಸಾಯುವ ಪರಿಸ್ಥಿತಿ ಎದುರಾಗಲಿದೆ. ಆ್ಯಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ ಕೊರೆತಯಾಗಿದೆ. ಸರ್ಕಾರ ವಿಶೇಷ ನೇಮಕಾತಿ ಪ್ರಾರಂಭಿಸಲಿ. ನರ್ಸ್, ವೈದ್ಯರು, ಪೌರಕಾರ್ಮಿಕರನ್ನ ತೆಗೆದುಕೊಳ್ಳಲಿ. ಅಗತ್ಯವಾದಷ್ಟು ಸಿಬ್ಬಂದಿಯನ್ನ ತುರ್ತು ಸೇವೆಗೆ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
ತೊಂದರೆ ಏನಿದೆ?
ಆ್ಯಂಬುಲೆನ್ಸ್ ಖರೀದಿಗೆ ಯಾವ ತೊಂದರೆಯಿದೆ? ವಾರ್ಡ್ಗೆ ಎರಡು ಕೊಡ್ತೇವೆ ಅಂತಾರೆ, ಆದರೆ ಯಾವಾಗ? ಇಟಲಿ ಪರಿಸ್ಥಿತಿ ಬರದಂತೆ ಗಮನಹರಿಸಿ. ಅಂತ್ಯಕ್ರಿಯೆ ಮಾಡೋಕೂ ಕಷ್ಟವಾಗಲಿದೆ. ಮುತುವರ್ಜಿ ವಹಿಸಿ ಏನಾದ್ರೂ ಮಾಡಿದ್ದೀರಾ? ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗ್ತಿದ್ದಾರೆ. ಪರಿಹಾರದ ಮಾತು ದೂರವಿದೆ. ನಾಲ್ಕು ಕಿಟ್ ಹಂಚಿದ್ರೆ ಸಾಲದು. ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ಕೊಟ್ಟು ಸಮಸ್ಯೆ ಸೃಷ್ಟಿಸಿದ್ರಿ. ಕಾರ್ಮಿಕರ ಬದುಕನ್ನ ಬೀದಿಗೆ ತಂದ್ರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಗಂಭೀರ ಆರೋಪ ಮಾಡಿದರು.
ಐದು ಲಕ್ಷ ಹೆಲ್ತ್ ವಿಮೆ ಮಾಡಿಸಿ:
ಕೊರೊನಾ ಪಾಸಿಟಿವ್ ಬಂದವರಿಗೆ ಇನ್ಸುರೆನ್ಸ್ ಮಾಡಿಸಿ. ಐದು ಲಕ್ಷ ಹೆಲ್ತ್ ವಿಮೆ ಮಾಡಿಸಿ. ಆಗ ಸೋಂಕಿತ ವ್ಯಕ್ತಿಗೆ ಉಪಯೋಗವಾಗಲಿದೆ. ಸಿಎಂ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು. ಪ್ರತಿಪಕ್ಷಗಳ ಸಲಹೆಗಳನ್ನ ಪಡೆಯಬೇಕು. ಇಟಲಿ ಪರಿಸ್ಥಿತಿ ಬರುವ ಮುನ್ನ ಸಭೆ ಕರೆಯಿರಿ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಲಹೆ ನೀಡಿದೆ. ಆ ಸಲಹೆಗಳನ್ನ ಪಾಲಿಸಿ, ಕೊರೊನಾ ನಿಯಂತ್ರಿಸಿ. ಆಹಾರ ಇಲಾಖೆ ಟೆಂಡರ್ನಲ್ಲಿ ಅವ್ಯವಹಾರ ನಡೆದಿದೆ. ಆಸ್ಪತ್ರೆಗೆ ಕಳಪೆ ಸ್ಯಾನಿಟೈಸರ್ ಪೂರೈಕೆ ಮಾಡಲಾಗಿದೆ. ಹಲವು ಆಸ್ಪತ್ರೆಗಳು ಸ್ಯಾನಿಟೈಸರ್ ಕಳಪೆ ಎಂದು ವರದಿ ನೀಡಿವೆ. ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ ಬೇಡ ಎಂದರು.
ನಾವು ಮೊದಲೇ ಎಚ್ಚರಿಕೆ ನೀಡಿದ್ದೆವು:
ಸಚಿವರ ನಡುವೆ ಹೊಂದಾಣಿಕೆ ಕೊರತೆ ವಿಚಾರದ ಬಗ್ಗೆ ಮಾತನಾಡಿ, ಮಂತ್ರಿಗಳ ನಡುವೆ ವೈಮನಸ್ಸಿದ್ದರೆ ಸರಿಮಾಡಿಕೊಳ್ಳಿ. ಪ್ರತಿಪಕ್ಷ ನಾಯಕರು ಹಲವು ಎಚ್ಚರಿಕೆ ನೀಡಿದ್ದಾರೆ. ನಾವು ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ ಸರ್ಕಾರ ಇನ್ನೂ ಗಮನ ಹರಿಸಿಲ್ಲ. ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಿ. ರಾಜ್ಯ ಮಾನವ ಹಕ್ಕುಗಳ ಆಯೋಗ ಇದನ್ನ ಗಮನಿಸಬೇಕು. ನಾನೊಬ್ಬ ಸಾಮಾನ್ಯ ಮನುಷ್ಯನಾಗಿ ಮನವಿ ಮಾಡ್ತೇನೆ. ಮೊದಲು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.