ಬೆಂಗಳೂರು : ಜ್ವರದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಸಂಜೆ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಜೆಪಿ ನಗರದ ತಮ್ಮ ನಿವಾಸಕ್ಕೆ ತೆರಳಿರುವ ಹೆಚ್ಡಿಕೆ ಇಂದು ತಮ್ಮ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.
ಮಂಗಳವಾರ ಚುನಾವಣಾ ಪ್ರಚಾರಕ್ಕೆ : ಮಂಗಳವಾರ ಚುನಾವಣಾ ಪ್ರಚಾರಕ್ಕೆ ತೆರಳುವ ಕುಮಾರಸ್ವಾಮಿ ಅವರು, ಮಧ್ಯಾಹ್ನ 1 ಗಂಟೆಗೆ ಮೈಸೂರಿನ ಚಾಮರಾಜ ಕ್ಷೇತ್ರ ಹಾಗೂ 3 ಗಂಟೆಗೆ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅವರು, ಶನಿವಾರ ರಾತ್ರಿ ವೈದ್ಯರ ಸಲಹೆಯ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿದ್ದರೂ ಕುಮಾರಸ್ವಾಮಿ ಅವರು ಪ್ರಸ್ತುತ ವಿಧಾನಸಭಾ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧಪಡಿಸಿದ್ದರು.
ಚುನಾವಣಾ ಪ್ರಚಾರ ಮಾಡಬೇಕಾದ ಕ್ಷೇತ್ರಗಳ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಜ್ವರದಿಂದಾಗಿ ನಾಲ್ಕು ದಿನಗಳ ಕಾಲ ಪ್ರಚಾರ ಕೈಗೊಳ್ಳುವುದನ್ನು ರದ್ದುಪಡಿಸಲಾಗಿತ್ತು. ಸದ್ಯ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : ಕೊಟ್ಟ ಮಾತು ಉಳಿಸಿಕೊಳ್ಳುವ ರಾಜಕಾರಣಿ ಕುಮಾರಸ್ವಾಮಿ: ಹೆಚ್ ಡಿ ದೇವೇಗೌಡ