ಬೆಂಗಳೂರು: ಜಿಎಸ್ಟಿ ಏರಿಕೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ. ಪೆಟ್ರೋಲ್ ಬೆಲೆ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗಿದೆ. ಈಗ ಆಹಾರ ಪದಾರ್ಥಗಳಿಗೆ ಜಿಎಸ್ಟಿ ಏರಿಕೆ ಮಾಡಲಾಗಿದೆ. ಇದು ಜನ ವಿರೋಧಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ನಡೆದ ಮತದಾನಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇದು ಜನ ವಿರೋಧಿ ನಿರ್ಧಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ನಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮೇಲೆ ಜಿಎಸ್ಟಿ ಹೊರೆ ಹಾಕಲಾಗುತ್ತಿದೆ. ಜಿಎಸ್ಟಿ ಬಗ್ಗೆ ನಾನು ಮೊದಲೇ ವಿರೋಧ ಮಾಡಿದ್ದೆ. ಹಗ್ಗದ ಜೊತೆ ಕುತ್ತಿಗೆಯನ್ನು ಕೊಟ್ಟಿದ್ದೀರಾ ಅಂತ ಹೇಳಿದ್ದೆ. ಈ ನೀತಿಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಎಸ್ಟಿ ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರುತ್ತದೆ. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಬಿಜೆಪಿ ಸಮರ್ಥನೆ ಮಾಡಿಕೊಳ್ಳಬೇಕು. ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡುವುದು ಅವರ ಗುಣ. ಎಂಟು ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂದ್ವು. ಡಾಲರ್ ಬೆಲೆ ಏನಾಗಿದೆ. ಫಾರಿನ್ ಎಕ್ಸ್ ಚೇಂಜ್ ಕೂಡಾ ಖಾಲಿ ಆಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದ ವಿದೇಶಿಗರು ಬಂಡವಾಳ ಹೂಡಿಕೆ ವಾಪಸ್ ಪಡೆದಿದ್ದಾರೆ. ಇದು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ: ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕಾರ್ಯಕ್ರಮ ಬೇಡ ಎನ್ನುತ್ತಿದ್ದಾರೆ. ಈ ದೇಶದಲ್ಲಿ 1.7 ಮಿಲಿಯನ್ ಜನರು ಆಹಾರದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಭಿನ್ನವಾಗಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ರೇಖೆ ಬಡ ದೇಶಕ್ಕಿಂತ ಹಿಂದೆ ಇದೆ. ಜಿಡಿಪಿ ಜೊತೆ ಬಡತನ ರೇಖೆ ಕಡಿಮೆ ಮಾಡಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಾತ್ಯತೀತ ನೀತಿ ಬಗ್ಗೆ ಗೊತ್ತಿದೆ: ರಾಷ್ಟ್ರಪತಿ ಚುನಾವಣೆ ಪಕ್ಷಾಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯವರು ಇರಬಹುದು. ಆದರೆ, ಅವರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರ ಜಾತ್ಯತೀತ ನಿಲುವಿನ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರು, ಯಡಿಯೂರಪ್ಪ 2008 ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಯಡಿಯೂರಪ್ಪ ಜೊತೆ ಏನು ಮಾಡಿದರೆಂಬುದು ನನಗೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು.
ನಾನು ತಾಜ್ ವೆಸ್ಟ್ ಎಂಡ್ ನಲ್ಲಿ ಇಲ್ಲದೆ ಹೋಗಿದ್ದರೆ ಸರ್ಕಾರ ಉಳಿಯುತ್ತಿತ್ತು ಅಂದ್ರು. ಆಯ್ತು ಹಾಗೇ ಅಂದುಕೊಳ್ಳೋಣ. ಆದರೆ, ಇವತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ಯಾಕೆ ಹೋಯಿತೆಂಬುದನ್ನು ಜನರಿಗೆ ಹೇಳಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಮರೆತು ಹೋಗಿದ್ದೀರಾ?: ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ರೂ. ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ. ಇದು ಕೊನೆ ಚುನಾವಣೆ ಅಂತೀರಾ. ಭ್ರಷ್ಟಾಚಾರ ಸರ್ಕಾರ ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳ್ತಾರೆ. ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರು ಕಾರಣ. ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ. ಆದರೆ, ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿನ ಭ್ರಷ್ಟಾಚಾರ ಮರೆತು ಹೋಗಿದ್ದೀರಾ?. ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಿದೆ: ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನು ಮಾಡಿದ್ರಿ. ಯಾರ ಮೇಲೆ ಕ್ರಮ ಆಯಿತು. ಐಎಎಸ್ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ಸಿಕ್ಕಿತು. ಆ ಅಧಿಕಾರಿಯ ಮೇಲೆ ಏನು ಕ್ರಮ ಜರುಗಿಸಿದಿರಿ. ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದೆ. ಬೇಕಾದರೆ ಆ ಬಗ್ಗೆ ಚರ್ಚೆ ಮಾಡಬಹುದು ಎಂದು ಕುಮಾರಸ್ವಾಮಿ ಸವಾಲು ಹಾಕಿದ್ರು.