ಬೆಂಗಳೂರು: ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳನ್ನೂ ದಮನ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗಲೆಲ್ಲಾ ಜನರೇ ತಮ್ಮ ಶಕ್ತಿ ತೋರಿಸುತ್ತಾರೆ ಎಂಬುದಕ್ಕೆ ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಗುಡುಗಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಟಿಲ್ಲಿ ಮಾತನಾಡಿದ ಅವರು, ಅಚ್ಛೇ ದಿನ್ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಯುವಕರು ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ದೇಶದ ಜನರ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಅವರು ಸ್ಪದಿಸಬೇಕು ಎಂದು ಸಲಹೆ ನೀಡಿದರು.
ಹಾಲು ಆಮದಿಗೆ ವಿರೋಧ
ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ದೇವೇಗೌಡರು, ಈ ಬಗ್ಗೆ ನಾನು ಹೋರಾಟ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್.ಡಿ. ರೇವಣ್ಣ ಕೆಎಂಎಫ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದ್ದಾರೆ. ನಷ್ಟದಲ್ಲಿದ್ದ ಸಂಸ್ಥೆಗೆ 4 ಸಾವಿರ ಕೋಟಿ ರೂ. ಲಾಭವನ್ನು ತಂದುಕೊಟ್ಟರು. ಸೂಪರ್ ಮಾರ್ಕೆಟ್ ಮಾಡಿದರು. ರೇವಣ್ಣರನ್ನು ಮಿಲ್ಕ್ ಮ್ಯಾನ್ ಎಂದು ಕರೆದರು. ಈಗ ಹಾಲನ್ನು ಆಮದು ಮಾಡಿಕೊಂಡರೆ ರೈತರಿಗೆ ತೊಂದರೆ ಆಗುತ್ತದೆ. ಇದರ ವಿರುದ್ಧ ನಾನು ತೀವ್ರ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಟ್ಟಿಟ್
ಸಿದ್ದರಾಮಯ್ಯ ಕುರಿತ ಕುಮಾರಸ್ವಾಮಿ ಟ್ಟಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಕುಮಾರಸ್ವಾಮಿ ಅವರು ವಾಸ್ತವಾಂಶ ಹೇಳಿದ್ದಾರೆ. ಸರ್ಕಾರ ಬೀಳುವುದಕ್ಕೆ ಏನಾಯ್ತು ಎಂದು ಗೊತ್ತು. ಬಿಜೆಪಿ ಜೊತೆ ಹೋದವರ ಬಗ್ಗೆನೂ ಗೊತ್ತು. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು ಸಿದ್ದರಾಮಯ್ಯ. ಹಾಗೆಯೇ ಪ್ರಚಾರ ಸಹ ಮಾಡಿದ್ದರು. ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಗೆಲ್ಲಬೇಕಾಯ್ತು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಕಾರಣದಿಂದ ಸರ್ಕಾರ ರಚನೆಗೆ ಒಪ್ಪಿದ್ದೆವು. ಅವರೇ ಮನೆಗೆ ಬಂದು ಮನವಿ ಮಾಡಿದ್ದರು. ಕೊನೆಗೆ ನಮಗೆ ಶಿಕ್ಷೆ ನೀಡಿದರು. ಧರ್ಮಸ್ಥಳಕ್ಕೆ ಹೋಗಿ ಯಾರ್ಯಾರ ಜೊತೆ ಏನು ಮಾತನಾಡಿದರು ಎಂಬುದು ಗೊತ್ತು. ಅಲ್ಲಿಂದ ಬಂದ ನಂತರ ಲಂಡನ್ ಗೆ ಹೋದರು, ಮಲೇಷ್ಯಾಕ್ಕೆ ಹೋದ್ರು. ಅಲ್ಲಿಂದ ಬಂದ ನಂತರ ಸಿದ್ದರಾಮಯ್ಯ ಏನು ಮಾಡಿದರೆಂಬುದು ರಾಜ್ಯದ ಜನತೆಗೂ ಗೊತ್ತು ಎಂದು ದೇವೇಗೌಡರು ಮುಗುಳುನಗೆ ಬೀರಿದರು.