ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು 'ಕಾಲಾ ಕುಮಾರಸ್ವಾಮಿ' ಎಂದು ಕರೆದಿರುವ ವಿಡಿಯೋದೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ತೀವ್ರ ವಾಗ್ದಾಳಿ ನಡೆಸಿದೆ. ಅಲ್ಲದೇ, ಕೇಂದ್ರ ಸಚಿವ ಕಿರಣ್ ರಿಜಿಜು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರೂ ಕೂಡ ಕಿಡಿಕಾರಿದ್ದಾರೆ.
''ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರನ್ನು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ'' ಎಂದು ಜೆಡಿಎಸ್ ಆರೋಪಿಸಿದೆ. ''ಜಮೀರ್ ಅಹಮದ್ ಅವರು ಕಪ್ಪು ವರ್ಣದವರ ಬಗ್ಗೆ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವುದು ಅಕ್ಷಮ್ಯ ಅಪರಾಧ'' ಎಂದು ಕಿಡಿಕಾರಿದೆ.
ವರ್ಣನಿಂದಕ, ಜನಾಂಗೀಯ ದ್ವೇಷಿ ಮಿಸ್ಟರ್ ಜಮೀರ್,
— Janata Dal Secular (@JanataDal_S) November 11, 2024
ನಿನ್ನನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ನಿನ್ನ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ.. ನಿನ್ನ ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ.
•…
''ವರ್ಣನಿಂದಕ, ಜನಾಂಗೀಯ ದ್ವೇಷಿ ಮಿಸ್ಟರ್ ಜಮೀರ್ ಎಂದಿರುವ ಜೆಡಿಎಸ್, ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ಜಮೀರ್ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ. ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ'' ಎಂದು ವಾಗ್ದಾಳಿ ನಡೆಸಿದೆ. ಅಲ್ಲದೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರ ಹೆಸರನ್ನು ಬರೆದಿರುವ ಜೆಡಿಎಸ್, ಅವರ ಬಣ್ಣ ಯಾವುದು? ಎಂದು ಪ್ರಶ್ನೆ ಮಾಡಿದೆ.
''ಮನುಷ್ಯರ ಚರ್ಮ ಕಪ್ಪಾದರೇನು, ಬಿಳಿಯಾದರೇನು? ಇಷ್ಟೊಂದು ಕೀಳು ಮನಸ್ಥಿತಿಯ ವ್ಯಕ್ತಿ ಜಮೀರ್ ಅಹಮದ್ ಅವರನ್ನು ಈ ಕೂಡಲೇ ಸಂಪುಟದಿಂದ ವಜಾ ಮಾಡಿ'' ಎಂದು ಸರ್ಕಾರ ಹಾಗೂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿರುವ ಜೆಡಿಎಸ್, ''ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು'' ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ರಾಮನಗರ ಜಿಲ್ಲಾ ಪೊಲೀಸರಿಗೆ ಒತ್ತಾಯಿಸಿದೆ.
I strongly deplore Congress Minister Zameer Ahmed calling Union Minister & Ex CM of Karnataka Sh. Kumaraswamy as 'Kaalia Kumaraswamy'. This is a racist remark, same as Rahul Gandhi's adviser calling South Indians look like Africans, North East as Chinese, North Indians as Arabs.
— Kiren Rijiju (@KirenRijiju) November 11, 2024
ಕಿರಣ್ ರಿಜಿಜು ಖಂಡನೆ: ಜಮೀರ್ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಕಿಡಿಕಾರಿದ್ದು, ''ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಖಾನ್ ಅವರು ಕೇಂದ್ರ ಸಚಿವರು ಮತ್ತು ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು 'ಕಾಲಿಯಾ ಕುಮಾರಸ್ವಾಮಿ' ಎಂದು ಕರೆಯುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ, ಈಶಾನ್ಯದವರು ಚೀನಿಯರು, ಉತ್ತರ ಭಾರತೀಯರು ಅರಬ್ಬರು ಎಂದು ರಾಹುಲ್ ಗಾಂಧಿಯವರ ಸಲಹೆಗಾರರು ಕರೆದಂತೆಯೇ ಇದು ಕೂಡ ಜನಾಂಗೀಯ ನಿಂದನೆಯಾಗಿದೆ'' ಎಂದು ಆರೋಪಿಸಿದ್ದಾರೆ.
ಜಮೀರ್ ವಜಾಕ್ಕೆ ವಿಜಯೇಂದ್ರ ಆಗ್ರಹ: ''ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ ಗೂಡನ್ನಾಗಿಸಲು ಪಣತೊಟ್ಟಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ಭರದಲ್ಲಿ ಸಂಸ್ಕೃತಿ ಹೀನರಂತೆ ವರ್ತಿಸಿದ್ದಾರೆ. ನಾಗರಿಕ ಪರಿಭಾಷೆಯ ಪರಿಚಯವೇ ಇಲ್ಲದಂತೆ ಮಾತನಾಡುವ ಜಮೀರ್ ಅವರ ವರ್ತನೆ ಅತ್ಯಂತ ಖಂಡನೀಯ. ಚನ್ನಪಟ್ಟಣದಲ್ಲಿ ಭಾಷಣ ಮಾಡುವ ವೇಳೆ ಅವರು ಬಳಸಿರುವ ಪದಪುಂಜಗಳು ಪುಟ್ ಪಾತ್ ಪೋಕರಿಗಳೂ ನಾಚಿಸುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ ಗೂಡನ್ನಾಗಿಸಲು ಪಣತೊಟ್ಟಂತೆ ವರ್ತಿಸುತ್ತಿರುವ ಸಚಿವ @BZZameerAhmedK ಇದೀಗ ಕೇಂದ್ರ ಸಚಿವರಾದ ಮಾನ್ಯ @hd_kumaraswamy ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ಭರದಲ್ಲಿ ಸಂಸ್ಕೃತಿ ಹೀನರಂತೆ ವರ್ತಿಸಿದ್ದಾರೆ. ನಾಗರಿಕ ಪರಿಭಾಷೆಯ ಪರಿಚಯವೇ ಇಲ್ಲದಂತೆ ಮಾತನಾಡುವ ಜಮೀರ್ ಅವರ… pic.twitter.com/8L2ffOa0ny
— Vijayendra Yediyurappa (@BYVijayendra) November 11, 2024
''ಇಂಥವರನ್ನು ಸಚಿವರನ್ನಾಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಇತ್ತೀಚೆಗೆ ತಮ್ಮ ಹತಾಶೆಯ ಮನಸ್ಥಿತಿಯಿಂದ ಭಂಡ ಸಮರ್ಥನೆಗಿಳಿದು ಮಾಧ್ಯಮದವರ ಮೇಲೆ ಎರಗಿ ಬೀಳುತ್ತಿದ್ದಾರೆ. ಜಮೀರ್ ಅಹಮದ್ ರವರು ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಸಮಾಜದಲ್ಲಿ ವಿದ್ವಾಂಸಕ ಸ್ಥಿತಿ ನಿರ್ಮಾಣ ಮಾಡುವುದು ತಮ್ಮ ಗುರಿ ಎಂದು ಭಾವಿಸಿದಂತಿದೆ. ಇಂತಹ ವರ್ತನೆಗಳನ್ನು ಕಾಂಗ್ರೆಸ್ ಪಕ್ಷ ಕೂಡ ವ್ಯವಸ್ಥಿತವಾಗಿ ನೀರೆರೆದು ಪೋಷಿಸುತ್ತಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಸಚಿವ ಸ್ಥಾನದ ಘನತೆಗೆ ತುಕ್ಕು ಹಿಡಿಸುತ್ತಿರುವ ಜಮೀರ್ ಅಹ್ಮದ್ ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಲೆಂದು ಒತ್ತಾಯಿಸುತ್ತೇನೆ'' ಎಂದಿದ್ದಾರೆ.
ಜಮೀರ್ ಅಹಮದ್ ಖಾನ್ ಸ್ಪಷ್ಟನೆ: ಕುಮಾರಸ್ವಾಮಿ ಬಗ್ಗೆ ಪದ ಬಳಕೆ ಕುರಿತಂತೆ, ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಜಮೀರ್, ''ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ 'ಕರಿಯಣ್ಣ' ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ 'ಕುಳ್ಳ' ಎನ್ನುತ್ತಾರೆ. ಹಾಗಾಗಿ, ನೆನ್ನೆ ಭಾಷಣ ಮಾಡುವಾಗ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.
''ಮೊದಲಿನಿಂದಲೂ ಅವರನ್ನು ಹಾಗೆಯೇ ಕರೆದು ಅಭ್ಯಾಸವಿರುವುದರಿಂದ, ನಿನ್ನೆಯ ಭಾಷಣದಲ್ಲೂ ಹಾಗೆಯೇ ಕರೆದಿರುವೆ. ನಾವಿಬ್ಬರು ಬೇರೆ ಪಕ್ಷದಲ್ಲಿದ್ದರೂ ನಮ್ಮ ಸ್ನೇಹ ಅಳಿಯುವುದಿಲ್ಲ. ಹಳೆಯದ್ದನ್ನು ಮರೆಯುವುದಕ್ಕೆ ಆಗುವುದಿಲ್ಲ. ನಾನೀಗ ಕಾಂಗ್ರೆಸ್‌ನಲ್ಲಿದ್ದರೂ, ನನ್ನ ರಾಜಕೀಯ ಗುರು ಹೆಚ್.ಡಿ. ದೇವೇಗೌಡರು'' ಎಂದು ಹೇಳಿದರು.
ಇದನ್ನೂ ಓದಿ: 'ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಕರಿಯಣ್ಣ ಅಂತ ಕರೆದಿದ್ದೇನೆ‘: ಜಮೀರ್ ಅಹಮದ್ ಖಾನ್ ಸ್ಪಷ್ಟನೆ