ಬೆಂಗಳೂರು: ಉತ್ತಮ ಆರೋಗ್ಯ ಹಾಗೂ ಸದೃಢ ದೇಹ ಕಾಪಾಡಿಕೊಳ್ಳಲು ನಗರ ಪೊಲೀಸರು ಫಿಟ್ನೆಸ್ ಮಂತ್ರ ಜಪಿಸಿದ್ದಾರೆ. ಸಿ.ಕೆ.ಅಚ್ಚುಕಟ್ಟು ಠಾಣೆಯ ಇನ್ ಸ್ಪೆಕ್ಟರ್ ಜನಾರ್ದನ್ ಇಚ್ಚಾಶಕ್ತಿ ಮೇರೆಗೆ ಠಾಣೆಯ 80 ಮಂದಿ ಪೊಲೀಸರು ಜಿಮ್ನಾಸ್ಟಿಕ್ ಮೊರೆ ಹೋಗಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಲು ಪೊಲೀಸರಿಗೆ ಇದು ಸಹಾಯವಾಗಿದೆ.
ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ಪೊಲೀಸರಿಗೆ ಫಿಟ್ನೆಸ್ ಕಾಯ್ದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚನೆ ಮಾಡಲು ಸಮಯ ಇರುವುದಿಲ್ಲ. ಕ್ರಿಮಿನಲ್ಗಳನ್ನು ಹಿಡಿಯುವುದು, ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಪೊಲೀಸರಿಗೆ ಮುಗಿಯದ ಸವಾಲು.
ಕೆಲವು ಪೊಲೀಸ್ ಠಾಣೆಗಳ ಸಿಬ್ಬಂದಿಗೆ ವಾರದ ರಜೆ ಸಿಗುತ್ತಿಲ್ಲ.ಇದರಿಂದ ಸಿಬ್ಬಂದಿ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿ ಕೆಲಸ ಮೇಲೆ ಅಡ್ಡ ಪರಿಣಾಮ ಬೀರುತ್ತಿವೆ. ಇದನ್ನು ಕಂಡುಕೊಂಡಿರುವ ಇನ್ಸ್ಪೆಕ್ಟರ್ ಜನಾರ್ದನ್, ಕಳೆದೊಂದು ತಿಂಗಳಿಂದ ತರಬೇತುದಾರರ ನೆರವಿನಿಂದ ಪ್ರತಿದಿನ ಜಿಮ್ನಾಸ್ಟಿಕ್ಸ್ ಹೇಳಿಕೊಡುತ್ತಿದ್ದಾರೆ.
ಯೋಗ, ಗರಡಿ ಮನೆ ಹಾಗೂ ಸ್ಲೈಕಿಂಗ್ಗಲ್ಲಿ ತೊಡಗಿಕೊಂಡಿದ್ದ ಇನ್ಸ್ಪೆಕ್ಟರ್ ಜನಾರ್ದನ್, ಲಾಕ್ಡೌನ್ ವೇಳೆ ಪ್ರತಿದಿನ ಫಿಟ್ ಆಗಿರಲು ನೆರವಾಗುವ ವ್ಯಾಯಾಮ ಹೇಳಿಕೊಟ್ಟರೆ ಹೇಗೆ? ಎಂದು ಯೋಚಿಸಿದರಂತೆ. ಐಡಿಯಾ ಹೊಳೆಯುತ್ತಿದ್ದಂತೆ ಕೂಡಲೇ ಎಲ್ಲಾ ಸಿಬ್ಬಂದಿಗೂ ಇದರ ಬಗ್ಗೆ ಹೇಳಿ ವ್ಯಾಯಾಮ ಕಸರತ್ತು ಆರಂಭಿಸಿದ್ದಾರೆ.
ಕಳೆದೊಂದು ತಿಂಗಳಿಂದ ಕ್ಯಾರಿ (ಒಬ್ಬರನ್ನು ಇನ್ನೊಬ್ಬರು ಎತ್ತಿ ಹೋಗುವುದೇ ಕ್ಯಾರಿ ಜೆಮ್ನಾಸ್ಟಿಕ್ ) ಜಿಮ್ನಾಸ್ಟಿಕ್ ಮಾಡುತ್ತಿರುವ ಕೆಲ ಸಿಬ್ಬಂದಿ ತೂಕ ಇಳಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಈ ಜಿಮ್ನಾಸ್ಟಿಕ್ಸ್ ಮಾನಸಿಕ ಒತ್ತಡ ಕಡಿಮೆ ಮಾಡಿದೆ.