ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ ಹಾಗೂ ಸೊಸೈಟಿಯಿಂದ ವಂಚನೆಗೊಳಗಾಗಿರುವ ಠೇವಣಿದಾರರಿಗೆ ಹಣ ಹಿಂತಿರುಗಿಸಲು ಆನ್‌ಲೈನ್ ಮೂಲಕ ಕ್ಲೇಮ್ ಸಲ್ಲಿಸಲು ಜುಲೈ ಮೊದಲ ವಾರದ ಬಳಿಕ ಅವಕಾಶ ನೀಡಲಾಗುವುದು ಎಂದು ಸಕ್ಷಮ ಪ್ರಾಧಿಕಾರದ ಅಧಿಕಾರಿ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ಹಗರಣದ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರಿ ಬಸವನಗುಡಿಯ ನರಸಿಂಹಮೂರ್ತಿ ಎಂಬುವರ ಜತೆಗೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಸಕ್ಷಮ ಪ್ರಾಧಿಕಾರದ ಅಧಿಕಾರಿ, ಆನ್‌ಲೈನ್ ಮೂಲಕ ಕ್ಲೇಮ್ ಸಲ್ಲಿಕೆಗೆ ಅವಕಾಶ ನೀಡಲು ಹೊಸ ಸಾಫ್ಟವೇರ್ ಸಿದ್ಧಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಜುಲೈ ಮೊದಲನೇ ವಾರದ ನಂತರ ಠೇವಣಿದಾರರಿಂದ ಕ್ಲೇಮ್ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದರು. ಪೀಠವೂ ಸಹ ಆದಷ್ಟು ಬೇಗ ಕ್ಲೇಮ್‌ಗಳ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿತು.
ಬ್ಯಾಂಕುಗಳಿಂದ ಸಾಲ ಪಡೆದವರು ಅದನ್ನು ವಾಪಸ್ ನೀಡಲು ಬಂದರೆ ಅವುಗಳನ್ನು ಸ್ವೀಕರಿಸಲು, ಅವಧಿ ಮುಗಿದಿರುವ ಠೇವಣಿಗಳ ಠೇವಣಿದಾರರಿಗೆ, ನವೀಕರಣಕ್ಕೆ ಬಂದರೆ ನವೀಕರಣ ಮಾಡಿಕೊಡುವುದು ಸೇರಿ ಹಲವು ವಿಚಾರಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಆಡಳಿತಾಧಿಕಾರಿಗೆ ಕೆಲ ಅಧಿಕಾರ ನೀಡುವ ಕುರಿತು ಪೀಠ ವಿಚಾರಣೆ ನಡೆಸಿತು.
ಆರ್‌ಬಿಐ ಪರ ವಕೀಲರು, ಸೌದಾರ್ಹ ಕಾಯ್ದೆ ಸೆಕ್ಷನ್ 17ರ ಪ್ರಕಾರ ಸರ್ಕಾರ ಆಡಳಿತಾಧಿಕಾರಿಗೆ ಕೆಲವೊಂದು ಅಧಿಕಾರಗಳನ್ನು ನಿಯೋಜಿಸಬಹುದಾಗಿದೆ ಎಂದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿ, ಅಂದು ಕೆಲವು ಆದೇಶಗಳನ್ನು ನೀಡುವುದಾಗಿ ತಿಳಿಸಿತು.