ಬೆಂಗಳೂರು: ರಾಜ್ಯದ ಪ್ರಮುಖ ಯೋಗ ಕಲಿಕಾ ಹಾಗೂ ಸಂಶೋಧನಾ ಕೇಂದ್ರವಾಗಿರುವ 'ಅಕ್ಷರ ಯೋಗ' ಸಂಸ್ಥಾಪಕರಾದ ಅಕ್ಷರ್ ಮಾರ್ಗದರ್ಶನದಲ್ಲಿ ಇಂದು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.
ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿರುವ ಅಕ್ಷರ ಯೋಗ ಆರ್ ಮತ್ತು ಡಿ ಸೆಂಟರ್‌ನಲ್ಲಿ 285 ಜನ ಯೋಗ ಪಟುಗಳು 2 ನಿಮಿಷಗಳ ಕಾಲ ಧನುರಾಸನ ಅಥವಾ ಬೋ ಪೋಸ್ ಎಂದು ಕರೆಯಲ್ಪಡುವ ಭಂಗಿಯನ್ನು ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
ಅಕ್ಷರ ಯೋಗ ಸಂಸ್ಥಾಪಕರಾದ ಹಿಮಾಲಯನ್ ಸಿದ್ಧರಾಗಿರುವ ಅಕ್ಷರ್ ಈ ಗಿನ್ನೆಸ್ ದಾಖಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ದಾಖಲೆಯನ್ನು ಸಾಧಿಸುವ ಪ್ರಯತ್ನದ ಉದ್ದೇಶ ಯೋಗದ ಶಕ್ತಿಯ ಬಗ್ಗೆ ಜಗತ್ತಿಗೆ ಸಂದೇಶ ಸಾರುವುದು. ಯೋಗಾಭ್ಯಾಸದ ಮೂಲಕ ನಿಮ್ಮ ಜೀವನವನ್ನು ಹೇಗೆ ಕಾಪಾಡಿಕೊಳ್ಳಬಹುದು ಹಾಗೂ ಸುಂದರವಾಗಿಸಿಕೊಳ್ಳಬಹುದು ಎಂಬುದು ಈ ಪ್ರದರ್ಶನದ ಉದ್ದೇಶವಾಗಿದೆ ಎಂದರು.
ವಿವಿಧ ಹಿನ್ನೆಲೆಯುಳ್ಳ ಯೋಗ ಸಾಧಕರಿಂದ ದಾಖಲೆ: ಈ ಸಾಧನೆಯಲ್ಲಿ ಭಾಗವಹಿಸಿದ್ದವರು ವಿವಿಧ ಹಿನ್ನೆಲೆಯುಳ್ಳ ಯೋಗ ಸಾಧಕರಾಗಿದ್ದಾರೆ. ಕೆಲವರು ಕಾರ್ಪೋರೇಟ್ ವಲಯಗಳಲ್ಲಿ ಕೆಲಸ ಮಾಡುವ ವೃತ್ತಿಪರರಾಗಿದ್ದರೆ ಇತರರು ವೈವಿಧ್ಯಮಯ ಹಿನ್ನೆಲೆಯ ಗೃಹಿಣಿಯರು. ದೇಶಾದ್ಯಂತ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ದಾಖಲೆಯಲ್ಲಿ ಭಾಗವಹಿಸಿದ್ದರು.
ಹಲವರ ಸಹಯೋಗ: ಹಿಮಾಲಯ ಯೋಗ ಆಶ್ರಮ, ವಿಶ್ವ ಯೋಗ ಸಂಸ್ಥೆ, ಇಂಟರ್‌ನ್ಯಾಷನಲ್ ಸಿದ್ಧ ಫೌಂಡೇಶನ್, ಯೂ ಯೋಗ್ ಮತ್ತು ಇತರ ಯೋಗ ಸಂಸ್ಥೆಯವರ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇದನ್ನೂ ಓದಿ: ತುಮಕೂರು ವಿವಿ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದ ಸಹಾಯ.. ಸಿಎಂ ಬೊಮ್ಮಾಯಿ