ಬೆಂಗಳೂರು: ಆಮ್ಲಜನಕದ ಕೊರತೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು, ಆಮ್ಲಜನಕದ ಬಳಕೆಗೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ಆಮ್ಲಜನಕದ ನಿರ್ವಹಣೆಗೆ ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆ ಆಗಿದೆ. ಆರೋಗ್ಯ ಸಚಿವರು, ಸಿಎಂ, ಕೈಗಾರಿಕಾ ಸಚಿವರ ಜೊತೆಗೂ ಸಭೆ ಆಗಿದೆ. ಕೈಗಾರಿಕೆಗಳಿಂದ ಸಗಟು (ಬಲ್ಕ್) ವಿತರಣೆ ಆಗಲಿದೆ. ಸದ್ಯಕ್ಕೆ 300 ಟನ್ ಅಗತ್ಯ ಇದೆ, ಅದರ ಲಭ್ಯತೆಯೂ ಇದೆ. ಆದರೆ, ಸರಿಯಾದ ನಿಟ್ಟಿನಲ್ಲಿ ಹಂಚಿಕೆ ಆಗಬೇಕಿದೆ. ಹೀಗಾಗಿ ಎಲ್ಲಾ ಆಸ್ಪತ್ರೆಗಳ ಆಮ್ಲಜನಕದ ವ್ಯವಸ್ಥೆ ಬಗ್ಗೆ ತಿಳಿದು, ಎಲ್ಲೆಲ್ಲಿ ಸಮಸ್ಯೆ ಆಗ್ತಿವೆ ಅದನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಆಗ್ತಿದೆ ಎಂದರು.
ಮುಂದುವರಿದು, ಆಕ್ಸಿಜನ್ ಸಪ್ಲೈ ಹಿಂದಿಗಿಂತ ಐದು ಪಟ್ಟು ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ ನಾಲ್ಕು ದಿನಕ್ಕೆ ಆಮ್ಲಜನಕಗಳ ಟ್ಯಾಂಕ್ ತುಂಬಿಸಲಾಗುತ್ತಿತ್ತು, ಆದರೆ ಈಗ ದಿನಕ್ಕೆ ಮೂರ್ನಾಲ್ಕು ಬಾರಿ ತುಂಬಿಸಲಾಗುತ್ತಿದೆ. ಆಮ್ಲಜನಕದ ಬಳಕೆಗೆ ಮಾರ್ಗಸೂಚಿ ಪ್ರಕಟವಾಗಲಿದೆ. ಎಲ್ಲಿ ಅಗತ್ಯವಿದೆ ಅಲ್ಲಿ ಅಷ್ಟೇ ಆಮ್ಲಜನಕ ಬಳಸಬೇಕು. ಆಕ್ಸಿಜನ್ ಸಪ್ಲೈ ಹಾಗೂ ಡಿಸ್ಟ್ರಿಬ್ಯೂಷನ್ ಬಗ್ಗೆಯೂ ಸಮಿತಿಯಲ್ಲಿ ಚರ್ಚೆ ಆಗಿದೆ. ಹೀಗಾಗಿ ಸಮಿತಿ ರಚನೆ ಮಾಡಿ, ಅದರಲ್ಲಿರುವ ಸ್ಥಳೀಯ ಅಧಿಕಾರಿಗಳನ್ನು ಎಲ್ಲಾ ಆಸ್ಪತ್ರೆಗಳಿಗೆ ನಿಯೋಜಿಸುವ ಕೆಲಸ ಆಗಲಿದೆ ಎಂದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಆಕ್ಸಿಜನ್ ಯಾವುದೇ ಹಂತದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ಪ್ರಮುಖ ಇಲಾಖೆಗಳ ಸಭೆ ಆಗಿದೆ. ಸುಲಭವಾಗಿ ಹಂಚಲು ಅಡ್ಡಿಯಾಗದಂತೆ ಸಮನ್ವಯತೆ ಮಾಡಿಕೊಳ್ಳಲಾಗುವುದು. ಜಿಂದಾಲ್ ಕಂಪನಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಹಾಗೂ ವಿತರಣೆ ಮಾಡಲು ಸೂಚಿಸಲಾಗಿದೆ. ಸಿಲಿಂಡಲ್ ಪೂರೈಕೆಯ ಕಂಪನಿಗಳ ಜೊತೆಗೂ ಸಭೆ ಆಗಿದೆ. ಆಕ್ಸಿಜನ್ ಪೂರೈಕೆ ವೇಳೆ, ನ್ಯಾಷನಲ್ ಹೈವೇ, ಟೋಲ್ ಬಳಿ, ಆರ್ ಟಿಒ ಕಚೇರಿಗಳಿಂದಲೂ ತೊಂದರೆ ಆಗಬಾರದು. ವಾಹನಗಳಿಗೆ ಎಮರ್ಜೆನ್ಸಿ ಸಿಂಬಲ್ ಸ್ಟಿಕ್ಕರ್ ನೀಡಲಾಗುವುದು. ಇಂಡಸ್ಟ್ರಿ ಉದ್ದೇಶಕ್ಕಿಂತ, ಮೆಡಿಕಲ್ ಉದ್ದೇಶಕ್ಕೇ ಹೆಚ್ಚು ಆಮ್ಲಜನಕ ಬಳಕೆಗೆ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಬೆಂಗಳೂರಿಗೆ 3,500 ಆಕ್ಸಿಜನ್ ಸಿಲಿಂಡರ್ ಜಿಂದಾಲ್ ಹಾಗೂ ಕುಣಿಗಲ್ ನಿಂದ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದ್ರು.
ನಗರದಲ್ಲಿ ನಿತ್ಯ ಕೋವಿಡ್ನಿಂದ ಮೃತಪಡುತ್ತಿರುವವರ ಸಂಖ್ಯೆ 90 ಕ್ಕೆ ಏರಿಕೆಯಾಗಿದೆ. ಒಂದೊಂದು ಸಾವು ಕೂಡಾ, ಐಸಿಯು ಬೆಡ್ ಸಿಗದೆ, ಅಥವಾ ಸಿಗೋದು ವಿಳಂಬವಾಗಿ ಸಾವನ್ನಪ್ಪಿರುವ ಘಟನೆಗಳೇ ಆಗಿವೆ. ಐಸಿಯು ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ರೋಗಿಗಳು ಅಲೆದಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಸಾಧು ಕೋಕಿಲ ಕೂಡಾ ನಗರದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಬಗ್ಗೆ ಮಾತನಾಡಿದ್ದು, ನಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆದ್ರೆ ಉಸಿರಾಟ ತೊಂದರೆಯಾದಾಗ, ಸೆಲೆಬ್ರೆಟಿಯಾಗಿ ಆಕ್ಸಿಜನ್ ಪಡೆಯೋಕೆ ನಾನೇ ಪರದಾಡಿದ್ದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕನಿಗೂ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಗದ ಕಾರಣ ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ ಕೇವಲ 331 ಐಸಿಯು ಹಾಸಿಗೆ, 272 ಐಸಿಯು ವಿತ್ ವೆಂಟಿಲೇಟರ್ ಬೆಡ್ಗಳಿವೆ. ಹೀಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.