ಆನೇಕಲ್(ಬೆಂಗಳೂರು): ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯ ಮುಖ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿ ಗ್ರೂಪ್ ನೌಕರನೊಬ್ಬ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪುರಸಭೆಯ ಮುಖ್ಯಾಧಿಕಾರಿ ಶ್ವೇತಾ ವಿರುದ್ಧ ವೇಣು ಎಂಬ ಡಿ ಗ್ರೂಪ್ ನೌಕರ ಕಿರುಕುಳ ಆರೋಪ ಮಾಡಿದ್ದಾರೆ.
ಈ ಕುರಿತು ಆತ್ಮಹತ್ಯೆಗೆ ಯತ್ನಿಸಿದ ನೌಕರ ವೇಣು ಮಾತನಾಡಿದ್ದು, ನನಗೆ ಪುರಸಭೆಯ ಮುಖ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ದೂರು ಬರೆದು ನನ್ನ ಪ್ಯಾಂಟ್ ಜೇಬಿನಲ್ಲಿಟ್ಟಿರುವೆ. ನನಗೆ ಮುಖ್ಯಾಧಿಕಾರಿ ಕಿರುಕುಳ ನೀಡುತ್ತಿದ್ದರು ಇತರ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಪುರಸಭೆ ಮುಖ್ಯಾಧಿಕಾರಿ - ಪ್ರತ್ಯಾರೋಪ: ಪುರಸಭೆಯ ಮುಖ್ಯಾಧಿಕಾರಿ ಶ್ವೇತಾ ಮಾತನಾಡಿ, ಅವರಿಗೆ ಕಿರುಕುಳ ಯಾರು ಕೊಟ್ಟಿಲ್ಲ, ನಾನು ಕಚೇರಿಯಲ್ಲಿಲ್ಲದಿರುವ ಸಮಯದಲ್ಲಿ ವಿಷ ಕುಡಿದಿದ್ದಾರೆ. ನಮ್ಮ ಕೆಲಸಕ್ಕೆ ಅಡ್ಡಿ ಮಾಡುವವರು ಬೇಕಂತಲೇ ವಿಷ ಕುಡಿ ಎಂದು ಪ್ರೋತ್ಸಾಹ ನೀಡಿ ವಿಡಿಯೋ ಮಾಡಿದ್ದಾರೆ. ಅವರಿಗೆ ಪುರಸಭೆಯ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡುವುದು ಇಷ್ಟ ಇಲ್ಲ. ಹೀಗಾಗಿ ನಮ್ಮನ್ನು ಬಲಿ ಕೊಡಲು ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ. ಅವರು ಗುಣಮುಖರಾದ ನಂತರ ಅವರಿಗೆ ವಿಷ ಕುಡಿಯಲು ಯಾರು ಪ್ರೋತ್ಸಾಹ ಕೊಟ್ಟರು ಎಂದು ಗೊತ್ತಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಬೇಡಿ ಎಂದು ಮನವಿ: ಸ್ಥಳೀಯ ಮಾಧ್ಯಮಗಳಲ್ಲಿ ಪುರಸಭೆಯಲ್ಲಿ ಮಧ್ಯವರ್ತಿಗಳ ಅಗತ್ಯ ಇಲ್ಲ, ಏನೇ ಇದ್ದರು ನಮ್ಮ ಬಳಿಗೆ ಬನ್ನಿ, ಮೋಸ ಹೋಗಬೇಡಿ ಎಂದು ಸುದ್ದಿಯನ್ನು ನಾನೇ ಹಾಕಿಸಿದ್ದೇನೆ. ಅಕ್ರಮವಾಗಿ ಖಾತೆಗಳನ್ನು ಮಾಡಿಕೊಡದಿದ್ದಾಗ ಈ ರೀತಿ ಆರೋಪಗಳು ಬರುತ್ತವೆ ಎಂದು ಹೇಳಿದರು.
ಇದನ್ನೂ ಓದಿ: ಆಭರಣ ಮಳಿಗೆಯಲ್ಲಿ 25 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಿದ್ದ ಆರೋಪಿ ಸೆರೆ( ಬೆಂಗಳೂರು): ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕ್‌ನಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. 2013ರಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕೃಷ್ಣಕುಮಾರ್ ಬಂಧಿತ ಆರೋಪಿ. ಬ್ಯಾಂಕ್ಗಳಿಗೆ ಸುಮಾರು 20 ಕೋಟಿ ರೂ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಯಾರದ್ದೋ ಜಾಗ, ಬಿಡಿಎ ನಿವೇಶನಗಳನ್ನ ಖರೀದಿಸುವ ನೆಪದಲ್ಲಿ ಅಲ್ಪ ಪ್ರಮಾಣದ ಮುಂಗಡ ಹಣ ನೀಡಿ ದಾಖಲೆಗಳ ಪ್ರತಿ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ನಂತರ ಅದಕ್ಕೆ ತಾವೇ ಮಾಲೀಕರು ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು.
ಬಳಿಕ ಆರೋಪಿಗಳಲ್ಲಿ ಒಬ್ಬರು ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಬಳಿಕ ಈ ಜಾಗ, ನಿವೇಶನಗಳನ್ನ ಖರೀದಿಸುವುದಾಗಿ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳುತ್ತಿದ್ದರು. ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಕೃಷ್ಣಕುಮಾರ್ ಮಾತ್ರ 2013ರಿಂದಲೂ ತಲೆ ಮರೆಸಿಕೊಂಡಿದ್ದ. ಸದ್ಯ ಬರೋಬ್ಬರಿ 10 ವರ್ಷಗಳ ಬಳಿಕ ಕೃಷ್ಣಕುಮಾರ್ನನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.