ಬೆಂಗಳೂರು: ವಿವಾದಿತ ಎಪಿಎಂಸಿ (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಪಾಲರು ಈ ಅಧ್ಯಾದೇಶವನ್ನು ಸಂಪುಟ ಒಪ್ಪಿಗೆ ಬಳಿಕ ಕಳುಹಿಸಿಕೊಡುವಂತೆ ವಾಪಸ್ ಕಳುಹಿಸಿದ್ದರು. ಇಂದು ಸಂಪುಟ ಸಭೆ ಎಪಿಎಂಸಿ ತಿದ್ದುಪಡಿ ಅಧ್ಯಾದೇಶಕ್ಕೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಅಧ್ಯಾದೇಶದಲ್ಲಿ ಎರಡು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ಅದರಂತೆ ಮಾರುಕಟ್ಟೆ ಸಮಿತಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ರೈತರು ತಾವು ಇಚ್ಛಿಸುವ ಖಾಸಗಿಯವರಿಗೆ ನೇರವಾಗಿ ಮಾರಬಹುದಾಗಿದೆ. ಹೀಗಾಗಿ ಮಾರುಕಟ್ಟೆ ಸಮಿತಿಗೆ ಮಾರುಕಟ್ಟೆ ಒಳಗೆ ಅಧಿಕಾರ ಇರುತ್ತದೆ. ಹೊರಗೆ ಇರುವುದಿಲ್ಲ. ಆದರೆ, ರಾಜ್ಯ ಮಾರುಕಟ್ಟೆ ಸಮಿತಿಯ ಅಧಿಕಾರ ಮೊಟಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಬಹಳ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರು ಯಾರಿಗೆ ಬೇಕಾದರೂ ಮಾರಬಹುದು. ಈ ಸಂಬಂಧ ಅನೇಕ ವರ್ಷಗಳಿಂದ ಕಾನೂನು ಇತ್ತು ಎಂದು ಸ್ಪಷ್ಟಪಡಿಸಿದರು. ಖಾಸಗಿ ಕಂಪನಿಗಳು ಬ್ಯಾಂಕ್ ಗ್ಯಾರಂಟಿ ಇಡುವುದು ಕಡ್ಡಾಯವಾಗಿದೆ. ರೈತರ ಹಿತದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ. ಕಮಿಷನ್ ಏಜೆಂಟ್ಗೆ ಇದರಿಂದ ನಷ್ಟವಾಗಲಿದೆ. ಮಾರುಕಟ್ಟೆಗೆ ಸೆಸ್ ಕಡಿಮೆಯಾಗಬಹುದು. ಆದರೆ ರೈತರ ಹಿತದೃಷ್ಟಿಯಿಂದ ಇದನ್ನು ತರಲಾಗಿದೆ ಎಂದರು.
ಬಿಡಿಎ ಅಕ್ರಮ ಸಕ್ರಮಕ್ಕೆ ಅಸ್ತು:
ಇನ್ನು ಬಿಡಿಎ ಬಡಾವಣೆ ಕಟ್ಟಡಗಳ ಅಕ್ರಮ ಸಕ್ರಮ ಯೋಜನೆಗೂ ಸಂಪುಟ ಅಸ್ತು ಎಂದಿದೆ. ಇದಕ್ಕಾಗಿ 38dಗೆ ತಿದ್ದುಪಡಿ ಮಾಡಲಾಗಿದೆ. ಬಡಾವಣೆಯಲ್ಲಿ 12 ವರ್ಷಕ್ಕೂ ಮುನ್ನ ಕಟ್ಟಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು.
ಅದರಂತೆ ಬಿಡಿಎಯ 6,000 ಎಕರೆ ಜಾಗದಲ್ಲಿ ಸುಮಾರು 75,000 ಅನಧಿಕೃತ ಕಟ್ಟಡಗಳಿವೆ. ಅವುಗಳನ್ನು ಸಕ್ರಮಗೊಳಿಸಲಾಗುವುದು. ಆದರೆ ಬಿಡಿಎಯ ಖಾಲಿ ನಿವೇಶನವನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಅದರಂತೆ 20/30 ಕಟ್ಟಡದವರು ಮಾರ್ಗಸೂಚಿ ದರದ 10%, 30/40 ನಿವೇಶನದಲ್ಲಿ ಕಟ್ಟಡ ಕಟ್ಟಿದವರು 20%, ಹಾಗೂ 40/60 ನಿವೇಶನದಲ್ಲಿ ಮನೆ ಕಟ್ಟಿದವರು ಮಾರ್ಗಸೂಚಿ ದರದ 40% ದಂಡ ಕಟ್ಟಬೇಕು ಎಂದು ತಿಳಿಸಿದರು. ಇದರಿಂದ ಸುಮಾರು 7000 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ ಎಂದರು.
ಆ ಮೂಲಕ 20/30 ಹಾಗೂ 30/40 ನಿವೇಶನದಲ್ಲಿರುವ 45 ಸಾವಿರ ಮನೆ ಮಾಲೀಕರು ಇದರ ಲಾಭ ಪಡೆಯಲಿದ್ದಾರೆ. ಸುಮಾರು 40/60 ನಿವೇಶನದಲ್ಲಿರುವ 25 ಸಾವಿರ ಮನೆ ಮಾಲೀಕರು ಲಾಭ ಪಡೆಯಲಿದ್ದಾರೆ ಎಂದರು.
ವಿಶೇಷ ಪ್ಯಾಕೇಜ್ ವಿಸ್ತರಣೆ:
ಸಂಪುಟ ಸಭೆ ವಿಶೇಷ ಪ್ಯಾಕೇಜ್ ಅನ್ನು 1,777 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಈ ಹಿಂದೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು ಎಂದು ಮಾಧುಸ್ವಾಮಿ ತಿಳಿಸಿದರು.
ಅದರಂತೆ 7 ಹಣ್ಣು ಬೆಳೆಗಳಾದ ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಖರ್ಜೂರ, ಬೋರೆ/ ಬೆಣ್ಣೆ ಹಣ್ಣು ಬೆಳೆಗಳಿಗೆ ಮತ್ತು 10 ಬಗೆಯ ವಿವಿಧ ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು, ಹೀರೇಕಾಯಿ, ತೊಂಡೆ ಕಾಯಿಗೆ ಪ್ರತಿ ಹೆಕ್ಟೇರ್ಗೆ 15 ಸಾವಿರ ರೂ.ನಂತೆ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು. ಆ ಮೂಲಕ ಒಟ್ಟು 137 ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ ಎಂದರು.
ಇನ್ನು 1.25 ಲಕ್ಷ ವಿದ್ಯುತ್ ಚಾಲಿತ ಘಟಕಕ್ಕೂ (ಪವರ್ ಲೂಮ್) ವಿಶೇಷ ಪ್ಯಾಕೇಜನ್ನು ವಿಸ್ತರಣೆ ಮಾಡಲಾಗಿದೆ ಎಂದರು. ವಿದ್ಯುತ್ ಚಾಲಿತ ಘಟಕದಲ್ಲಿ ಕೆಲಸ ಮಾಡುವ ಪ್ರತಿ ಕೂಲಿ ಕಾರ್ಮಿಕನಿಗೆ 2,000 ರೂ. ನೀಡಲಾಗುವುದು. ಆ ಮೂಲಕ 25 ಕೋಟಿ ರೂ. ವೆಚ್ಚ ತಗುಲಲಿದೆ. ಒಟ್ಟು 162 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಸಚಿವ ಮಾಧುಸ್ವಾಮಿ ಇದೇ ವೇಳೆ ತಿಳಿಸಿದರು.