ಬೆಂಗಳೂರು: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಪಣ ತೊಟ್ಟಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿಯಾಗಿ 142.59 ಕೋಟಿ ರೂ.ಗಳ ಅನುದಾನವನ್ನು ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರಾಜ್ಯದಲ್ಲಿರುವ ವಿವಿಧ ಸಮುದಾಯಗಳ 178 ಮಠಗಳಿಗೆ 108.24 ಕೋಟಿ ರೂಪಾಯಿಗಳು, 59 ದೇವಸ್ಥಾನಗಳಿಗೆ 21.35 ಕೋಟಿ ರೂಪಾಯಿಗಳು ಮತ್ತು 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ 13 ಕೋಟಿ ಒಟ್ಟು 142.59 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ಧಿಗಾಗಿ ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಹಾಗೂ ಅಭಿವೃದ್ಧಿಗೂ ವಿಶೇಷ ಆದ್ಯತೆಯನ್ನು ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿಸುವತ್ತ ಸ್ಪಷ್ಟವಾದ ಹೆಜ್ಜೆಯನ್ನು ಇಡಲಾಗಿದೆ.
ರಾಜ್ಯದ ಮುಜರಾಯಿ ಇಲಾಖೆಯ ಇತಿಹಾಸದಲ್ಲೇ ಬೃಹತ್ ಅಭಿವೃದ್ಧಿ ಪರ್ವದ ಮೈಲಿಗಲ್ಲು ನೆಡಲಾಗಿದೆ. ಕಾಶಿಯಾತ್ರೆ, ತಸ್ತೀಕ್ ಹಣ ಹೆಚ್ಚಳ ಸೇರಿದಂತೆ ಎಲ್ಲಾ ರೀತಿಯ ನೂತನ ಯೋಜನೆಗಳಿಗೂ ಮುಖ್ಯಮಂತ್ರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ : ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ ಪಕ್ಕಾ: ಕಾರಣವೇನು ಗೊತ್ತಾ?