ದೊಡ್ಡಬಳ್ಳಾಪುರ : 96 ವರ್ಷದ ಮುದಿ ಜೀವ. ಸಾಯುವ ಕಾಲದಲ್ಲಿ ಆಶ್ರಯ ಬೇಡುವ ಅಜ್ಜಿ ಮೊಮ್ಮಗನ ಮನೆಗೆ ಬಂದಿದ್ದಾಳೆ. ಆರೈಕೆ ಮಾಡುವುದಾಗಿ ಹೇಳಿ ಅಜ್ಜಿಯ ಹಣ ಮೊಮ್ಮಗ ನುಂಗಿ ಮನೆಯಿಂದ ಹೊರ ಹಾಕಿದ್ದಾನೆ. ಆಶ್ರಯ ಕಳೆದುಕೊಂಡಿರುವ ಅಜ್ಜಿಗೆ ಗ್ರಾಮದ ಅಶ್ವತ್ಥ್ ಕಟ್ಟೆಯ ಆಶ್ರಯವಾಗಿದ್ದು, ಗ್ರಾಮಸ್ಥರು ಕೊಡುವ ಆಹಾರವೇ ಆಧಾರವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ 96 ವರ್ಷದ ಬೈಲಮ್ಮ ಆಶ್ರಯ ಕಳೆದುಕೊಂಡು ಆಹಾರಕ್ಕಾಗಿ ಬೇರೆಯವರ ಮುಂದೆ ಅಂಗಲಾಚುವ ದುಸ್ಥಿತಿ ಬಂದಿದೆ. ಈ ಸಾಯುವ ಕಾಲದಲ್ಲಿ ತಾನು ಪಡುತ್ತಿರುವ ಕಷ್ಟ ನೆನೆದು ಕಣ್ಣಿರಿಡುತ್ತಿದ್ದಾಳೆ. ಅವಳ ಈ ಸ್ಥಿತಿಗೆ ಸ್ವಂತ ಮೊಮ್ಮಗನೇ ಕಾರಣ.
ಕೊನೆಗಾಲದಲ್ಲಿ ಮೊಮ್ಮಗನ ಆಶ್ರಯ ಅರಸಿ ಬಂದ ಅಜ್ಜಿಗೆ ಅಶ್ವತ್ಥ್ ಕಟ್ಟೆಯೇ ಆಶ್ರಯವಾಗಿದೆ. ಅಂದಹಾಗೆ ಅಜ್ಜಿ ದೇವನಹಳ್ಳಿಯ ಕುಂದಾಣದವರು. ಬಹಳ ಹಿಂದೆಯೇ ಆಕೆಯ ಗಂಡ ಮರಣಹೊಂದಿದ್ದರು. ತನ್ನ ಹೆಸರಿನಲ್ಲಿದ್ದ ಜಮೀನು ಮಾರಿ ಆ ಹಣವನ್ನು ಬ್ಯಾಂಕ್ನಲ್ಲಿಟ್ಟು ಕೊನೆ ದಿನಗಳನ್ನ ಎಣಿಸುತ್ತಿದ್ದರು. ಅದೇ ಸಮಯಕ್ಕೆ ಬಂದ ಆಕೆಯ ಮೊಮ್ಮಗ ತನ್ನ ಮನೆಗೆ ಬಾ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾನೆ.
ಆಶ್ರಯ ಸಿಕ್ಕಿದ್ರೆ ಸಾಕು ಅನ್ನುವ ಸ್ಥಿತಿಯಲ್ಲಿದ್ದ ಅಜ್ಜಿ ಮೊಮ್ಮಗನ ಆಹ್ವಾನ ಸ್ವೀಕರಿಸಿ ಬಹಳ ಸಂತೋಷದಿಂದ ದೊಡ್ಡಬಳ್ಳಾಪುರದ ಕಂಟನಕುಂಟೆಯ ಮೊಮ್ಮಗನ ಮನೆಗೆ ವರ್ಷದ ಹಿಂದೆ ಬಂದಿದ್ದಳು. ಅಜ್ಜಿಯನ್ನ ಪುಸಲಾಯಿಸಿದ ಮೊಮ್ಮಗ ಆಕೆಯ ಅಕೌಂಟ್ನಲ್ಲಿದ್ದ 12 ಲಕ್ಷ ಹಣ ಡ್ರಾ ಮಾಡಿಕೊಂಡಿದ್ಧಾನೆ. ಹಣ ಕೈಸೇರಿದ ನಂತರ ಅಜ್ಜಿಯನ್ನ ಬೈದು ಮನೆಯಿಂದ ಹೊರ ಹಾಕಿದ್ದಾನೆ.
ಮೊಮ್ಮಗನ ಆಶ್ರಯ ಕಳೆದುಕೊಂಡಿರುವ ಅಜ್ಜಿಗೆ ಗ್ರಾಮದ ಅರಳಿಕಟ್ಟೆಯ ಆಶ್ರಯ ತಾಣವಾಗಿದೆ. ಅಜ್ಜಿಯ ಸ್ಥಿತಿ ನೋಡಿದ ಅಕ್ಕಪಕ್ಕದ ಜನ ಊಟ, ತಿಂಡಿ ನೀಡಿ ಆರೈಕೆ ಮಾಡಿದ್ದಾರೆ. ಮಳೆ ಗಾಳಿ ಬಂದಾಗ ನಡುಗುತ್ತಲೇ ರಾತ್ರಿ ಕಳೆಯುತ್ತಾಳೆ. ಅಜ್ಜಿ ಪಡುತ್ತಿದ್ದ ಕಷ್ಟ ನೋಡಿ ಕನಿಕರ ಪಟ್ಟ ಗ್ರಾಮಸ್ಥರು ಅನಾಥಶ್ರಮಕ್ಕೆ ಸೇರಿಸುವ ಪ್ರಯತ್ನ ನಡೆಸಿದರು.
ಈ ಸುದ್ದಿ ತಿಳಿದ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಮೂರ್ತಿ ಅನಾಥಶ್ರಮ ಕಳಿಸು ವ್ಯವಸ್ಥೆ ಮಾಡಿದ್ದಾರೆ. ಕೊನೆಗಾಲದಲ್ಲಿ ಅಜ್ಜಿಗೆ ನೆಮ್ಮದಿ ನೆಲ ಸಿಕ್ಕ ಖುಷಿಯಲ್ಲಿ ಸಂತೋಷದಿಂದ ಆಕೆಯನ್ನ ಬೀಳ್ಕೊಟ್ಟರು.