ಬೆಂಗಳೂರು: ಮೀನು ಅಂಗಡಿಗೆ ನಡೆಸಲು ಪರವಾನಗಿ ಪತ್ರ ನೀಡಲು 3,500 ರೂ. ಲಂಚಕ್ಕೆ ಬೇಡಿಕೆ ಇಟ್ಟ ಶೀಗೆಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಗ್ರಾ.ಪಂ ಕಾರ್ಯದರ್ಶಿ ಸುಬ್ರಹ್ಮಣ್ಯ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ಬಂಧಿತರಾಗಿದ್ದಾರೆ.
ರಾಮಮೂರ್ತಿನಗರದ ನಿವಾಸಿಯೊಬ್ಬರು ಶೀಗೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ. ದೊಮ್ಮಸಂದ್ರದಲ್ಲಿ ಸಮುದ್ರದ ಮೀನು ಅಂಗಡಿ ತೆರೆಯಲು ಪರವಾನಗಿ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ಕಾರ್ಯರೂಪಕ್ಕೆ ತರಲು ಸುಬ್ರಹ್ಮಣ್ಯ ಹಾಗೂ ಮಂಜುನಾಥ್ ಅವರು ಸರ್ಕಾರಿ ಶುಲ್ಕ 1,500 ಮತ್ತು 3500 ರೂ. ಲಂಚ ಕೇಳಿದ್ದರು. ಈ ಬಗ್ಗೆ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.
ಶನಿವಾರ ಮಧ್ಯಾಹ್ನ ದೂರುದಾರರಿಂದ 3,500 ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರ ಆರೋಗ್ಯ ತಪಾಸಣೆ ಬಳಿಕ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಅಲ್ಲದೆ ಎಸಿಬಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: T20 World Cup: ಇಂದಿನಿಂದ ಚುಟುಕು ಕ್ರಿಕೆಟ್ ಟೂರ್ನಿ ಆರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ