ಬೆಂಗಳೂರು: ಉಪಚುನಾವಣೆ, ವಿಧಾನಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈಗಷ್ಟೇ ಮುಗಿದಿದ್ದು, ಇದೀಗ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ರೆಡಿಯಾಗುತ್ತಿದೆ.
ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಚುನಾವಣಾ ಕಣ ರಂಗೇರಿದೆ. ಈ ಚುನಾವಣೆಗಾಗಿ ಈಗಾಗಲೇ ಗ್ರಾಮಗಳಲ್ಲಿ ಪಕ್ಷ ರಾಜಕಾರಣದ ಭರಾಟೆ ಜೋರಾಗಿದೆ. ಪ್ರತಿಷ್ಠೆಯ ಈ ಕಣಕ್ಕಿಳಿಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನಾಯಕರಿಗೆ ದುಂಬಾಲು ಬೀಳುತ್ತಿದ್ದಾರೆ.
ಚುನಾವಣಾ ಆಯೋಗ ಸಿದ್ಧತೆ: ರಾಜ್ಯದ ಸುಮಾರು 5834 ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ರಾಜ್ಯ ಚುನಾವಣಾ ಆಯೋಗ ಮಾಡಿಕೊಂಡಿದೆ. ಚುನಾವಣಾ ಸಿಬ್ಬಂದಿ, ತರಬೇತಿ, ಮತಗಟ್ಟೆ ಗುರುತಿಸುವಿಕೆ, ಮತದಾರರ ಪಟ್ಟಿ, ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ದಿನಾಂಕ ಘೋಷಣೆ ಬಾಕಿ: ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕವಿನ್ನು ಪ್ರಕಟವಾಗಿಲ್ಲ. ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಘೋಷಣೆಯಾಗಬಹುದು. ಸಂಭಾವ್ಯ ಅಭ್ಯರ್ಥಿಗಳ ಚಟುವಟಿಕೆಗಳು ಗ್ರಾಮಗಳಲ್ಲಿ ಬಿರುಸುಗೊಂಡಿವೆ.
ಈಗಾಗಲೇ ಉಪಚುನಾವಣೆ, ವಿಧಾನಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಡಿತ ಸಾಧಿಸಿರುವ ಬಿಜೆಪಿ, ಗ್ರಾಮ ಪಂಚಾಯಿತಿಗಳಲ್ಲೂ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದೆ. ಅದೇ ರೀತಿ ಈ ಚುನಾವಣೆಗಳಲ್ಲಿ ಹಿನ್ನೆಡೆ ಕಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಇಲ್ಲಾದರೂ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪ್ರತಿತಂತ್ರ ಹೆಣೆಯುತ್ತಿವೆ. ಗ್ರಾಮ ಪಂಚಾಯಿತಿ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಲಿದೆಯೇ ಎಂಬುದು ಕಾದುನೋಡಬೇಕಿದೆ.