ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಆದರೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
![Minister Sudhakar](https://etvbharatimages.akamaized.net/etvbharat/prod-images/kn-bng-03-minister-sudhakar-on-state-covid-postivity-rate-ka10032_31012022181603_3101f_1643633163_156.jpg)
ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿವೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿವೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ.
ಆದರೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.2 ರಿಂದ 3ರಷ್ಟಿದೆ. 0.05ರಷ್ಟು ಮರಣ ಪ್ರಮಾಣವಿದೆ. ಇದು ಸದ್ಯದ ಸಮಾಧಾನಕಾರ ಸಂಗತಿಯಾಗಿದೆ.
ಆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸಿ ಎಂ ಇಬ್ರಾಹಿಂ ಪರಿಸ್ಥಿತಿ ಕಂಡು ಸಚಿವ ಕಾರಜೋಳ ಬೇಸರ
ಕೋವಿಡ್ ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಜನರ ಸಹಕಾರ, ಆರೋಗ್ಯ ಸಿಬ್ಬಂದಿಯ ಪರಿಶ್ರಮ ಹಾಗೂ ಉತ್ತಮ ಆಡಳಿತದಿಂದಾಗಿ ಮೊದಲ ಡೋಸ್ನಲ್ಲಿ ಶೇ.100ರಷ್ಟು ಸಾಧನೆಯಾಗಿದೆ. ಎರಡನೇ ಡೋಸ್ನಲ್ಲಿ ಶೇ.87ರಷ್ಟು ಸಾಧನೆಯಾಗಿದೆ. ಆದರೂ ನಿರಂತರವಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
3ನೇ ಅಲೆಯಲ್ಲಿ ಮತ್ತೆ ಪ್ರಕರಣಗಳ ಪ್ರಮಾಣ ಹೆಚ್ಚುವ ಸಂಭವ ಕಡಿಮೆ : ಮೂರನೇ ಅಲೆಯಲ್ಲಿ ಮತ್ತೆ ಪ್ರಕರಣಗಳ ಪ್ರಮಾಣ ಹೆಚ್ಚುವ ಸಂಭವ ಕಡಿಮೆ. ಪ್ರತಿ ದಿನ ರಾಜ್ಯದಲ್ಲಿ 2.5 ಲಕ್ಷ ಕೊರೊನಾ ಪರೀಕ್ಷೆ ಮಾಡಿ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಶೇ.32ರಷ್ಟು ಪಾಸಿಟಿವಿಟಿ ದರವಿದ್ದರೂ ಅದು ಇಳಿಕೆಯಾಗುತ್ತಿದೆ.
ಹೊಸ ವೈರಾಣು ಒಮಿಕ್ರಾನ್ ತೀವ್ರವಾಗಿ ಬಾಧಿಸುತ್ತಿಲ್ಲ. ಆದರೆ, ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಈ ವೈರಾಣುವಿನಲ್ಲೇ ಏನಾದರೂ ಬದಲಾವಣೆಯಾಗಲಿದೆಯೇ ಎಂದು ಗಮನಿಸಬೇಕಿದೆ. ಚಿತ್ರಮಂದಿರಗಳು ಮುಚ್ಚಿದ ಸ್ಥಳವಾಗಿದ್ದು, ಬೇರೆ ಉದ್ಯಮಕ್ಕಿಂತ ಭಿನ್ನವಾಗಿದೆ. ಚಿತ್ರಮಂದಿರಗಳಿಗೆ ವಿಧಿಸಿದ ನಿರ್ಬಂಧಗಳ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳೇ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ