ಬೆಂಗಳೂರು: ವಿಕಲಚೇತನ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಗೆ ಬರಬೇಕು. ಕೀಳರಿಮೆ ಕಳೆದು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಹೊಸ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ದೃಷ್ಟಿ ವಿಕಲಚೇತನರಿಗಷ್ಟೇ ಅಲ್ಲ, ಓದಲು ಬರದವರಿಗೂ ಶ್ರವ್ಯ ಪುಸ್ತಕಗಳ ಮೂಲಕ ತಮಗೆ ಬೇಕಾದ ಭಾಷೆಯನ್ನು ಕಲಿಯಬಹುದು. ಇದೀಗ ಇ-ಪುಸ್ತಕಗಳು ಸಾಮಾನ್ಯ ಮಕ್ಕಳನ್ನೂ ಆಕರ್ಷಿಸುತ್ತಿವೆ.
ಮಕ್ಕಳ ಆಟದ ಮೂಲಕ ಕಲಿಕೆಯಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಹಾಗಾಗಿ ಇಂತಹ ಪುಸ್ತಕಗಳನ್ನು ಬೀಕನ್ ಲೈಬ್ರರಿಗೆ ಒದಗಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಗಮನಾರ್ಹ ಸುಧಾರಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಏನಿದು ಶ್ರವ್ಯ ಪುಸ್ತಕ? :
ಪೆನ್ ಮಾದರಿಯ ಉಪಕರಣವೊಂದನ್ನು ಚಿತ್ರ ಅಥವಾ ಪದದ ಮೇಲೆ ಇರಿಸಿದಾಗ ಅದನ್ನು ಓದುತ್ತದೆ. ನೀವು ಆಯ್ಕೆ ಮಾಡಿದ ಭಾಷೆಯನ್ನು ನುಡಿಸುತ್ತದೆ. ಆಟದ ಕಲಿಕೆ ಆಧಾರದ ಮೇಲೆ ಇವು ರೂಪುಗೊಂಡಿವೆ. ಸಂಗೀತದ ಆಲ್ಬಂ ಹಾಗೂ ರೈಮ್‌ಗಳನ್ನು ಒಳಗೊಂಡಿದೆ.
ವಿವಿಧ ವಿಚಾರಗಳನ್ನು ಒಳಗೊಂಡಿದೆ:
ಇನ್ನು ಬ್ರೈಲ್ ಲಿಪಿಯ ಪುಸ್ತಕಗಳ ಪರಿಚಯ ಈಗಾಗಲೇ ಅನೇಕರಿಗಿದೆ. ಅದರ ಜೊತೆಗೆ ಈಗ ಶ್ರವ್ಯ ಪುಸ್ತಕಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ಸ್ಟೋರಿ ಆಲ್ಬಂ, ರೈಮ್ಸ್ ಸೇರಿದಂತೆ ಅನೇಕ ಭಾಷೆ, ವಿಷಯಗಳನ್ನು ಈ ಪುಸ್ತಕಗಳಿಂದ ಕಲಿಯಬಹುದು. ರೆಕಾರ್ಡಿಂಗ್ ಸೌಕರ್ಯವೂ ಇಲ್ಲುಂಟು. ಶ್ರವ್ಯದಲ್ಲಿ ಕನ್ನಡದ ಬಗ್ಗೆ ವಿಶೇಷ ಪುಸ್ತಕಗಳು ಕೂಡ ಬಂದಿವೆ. ಸಾಮಾನ್ಯ ಮಕ್ಕಳು ಹಾಗೂ ವಿಶೇಷವಾಗಿ ದೃಷ್ಟಿ ವಿಕಲಚೇತನ ಮಕ್ಕಳಿಗಾಗಿ ಬೀಕನ್ ಲೈಬ್ರರಿ ಅಭಿವೃದ್ಧಿಪಡಿಸುತ್ತಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ರಾಷ್ಟ್ರೀಯ ಸಾಧನಾ ಸಮೀಕ್ಷೆ ಅನ್ವಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಗುಣಮಟ್ಟದ ಕಲಿಕೆ, ಮಕ್ಕಳ ರಕ್ಷಣೆ, ಮಕ್ಕಳ ಶಿಕ್ಷಣ ಕಾರ್ಯಪಡೆ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸುತ್ತಿದೆ.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಈಗಾಗಲೇ ಹಂತ-ಹಂತವಾಗಿ ಡಿಜಿಟಲೀಕರಣಗೊಳ್ಳುತ್ತಿವೆ. ಕೆಲವು ಗ್ರಂಥಾಲಯದಲ್ಲಿ ಬೈಲ್ ಲಿಪಿಯ ಪುಸ್ತಕಗಳ ಲಭ್ಯತೆಯೂ ಇದೆ. ದೃಷ್ಟಿ ದೋಷವುಳ್ಳ ಅನೇಕರು ಈಗಾಗಲೇ ಈ ಪುಸ್ತಕಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇವುಗಳ ಜೊತೆಗೆ ಈಗ ಶ್ರವ್ಯ ಪುಸ್ತಕಗಳನ್ನು ಕೂಡ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ.
ಈ ವರ್ಷ ಪ್ರತಿ ತಾಲೂಕಿನಲ್ಲಿ ಒಂದು ಬೀಕನ್ ಲೈಬ್ರರಿ ಹಾಗೂ 24 ಡಿಜಿಟಲ್ ಗ್ರಂಥಾಲಯಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಒಟ್ಟು 226 ತಾಲೂಕುಗಳಲ್ಲಿ ಬೀಕನ್ ಲೈಬ್ರರಿ ಅಭಿವೃದ್ಧಿಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶ್ರವ್ಯ ಪುಸ್ತಕದಿಂದಾಗುವ ಉಪಯೋಗವೇನು? :
ಶ್ರವ್ಯ ಪುಸ್ತಕಗಳಿಂದ ಮಕ್ಕಳ ಆರಂಭಿಕ ಕಲಿಕೆ ಅಭ್ಯಾಸ ವೃದ್ಧಿಯಾಗುತ್ತದೆ. ಏಕಾಗ್ರತೆ ಸುಧಾರಣೆಯಾಗುತ್ತದೆ. ಸ್ಪಷ್ಟ ಉಚ್ಛಾರಣೆ ಕಲಿಯಬಹುದು. ಸ್ವಯಂ ಗತಿಯ ಕಲಿಕೆಯ ಬೆಳವಣಿಗೆಯನ್ನು ಶ್ರವ್ಯ ಪುಸ್ತಕಗಳು ಉತ್ತೇಜಿಸುತ್ತವೆ. ದೃಷ್ಟಿ ವಿಕಲಚೇತನರಿಗಷ್ಟೇ ಅಲ್ಲ, ಓದಲು ಬಾರದವರು ಈ ಪುಸ್ತಕಗಳ ಮೂಲಕ ತಮಗೆ ಬೇಕಾದ ಭಾಷೆಯನ್ನು ಕಲಿಯಬಹುದಾಗಿದೆ. ಈ ಕಾರಣಕ್ಕೆ ಈಗ ಈ ಪುಸ್ತಕಗಳು ಸಾಮಾನ್ಯ ಮಕ್ಕಳನ್ನೂ ಆಕರ್ಷಿಸುತ್ತಿವೆ.
ಗ್ರಾಪಂ ಗಳಲ್ಲಿ ಶ್ರವ್ಯ ಪುಸ್ತಕಗಳು ಲಭ್ಯ:
ಗ್ರಾಮೀಣ ಪ್ರದೇಶದಲ್ಲೂ ಪುಸ್ತಕಗಳು ಡಿಜಿಟಲೀಕರಣಗೊಂಡು ಮಕ್ಕಳನ್ನು ಆಕರ್ಷಿಸುತ್ತಿವೆ. ಡಿಜಿಟಲ್ ಗ್ರಂಥಾಲಯದಲ್ಲಿ ಅಂತರ್ಜಾಲ ಪ್ರಿಂಟರ್ ಸೌಲಭ್ಯ, ಇ-ಪುಸ್ತಕಗಳು, ಅಂಡ್ರಾಯ್ಡ್ ಟೆಲಿವಿಷನ್‌ಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ, ಕನ್ನಡ ಕಾದಂಬರಿ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ, ವ್ಯಕ್ತಿ ಜೀವನಾಧಾರಿತ ಪುಸ್ತಕಗಳು, ಆಧ್ಯಾತ್ಮಿಕ ಧಾರ್ಮಿಕ ಗ್ರಂಥಗಳು, ದಿನ ಪತ್ರಿಕೆಗಳು , ಸ್ಮಾರ್ಟ್ ಪುಸ್ತಕಗಳು ದೊರೆಯುತ್ತವೆ. ಕೆಲವು ಗ್ರಂಥಾಲಯದಲ್ಲಿ ಬ್ರೈಲ್ ಲಿಪಿಯ ಪುಸ್ತಕಗಳ ಲಭ್ಯತೆಯೂ ಇದೆ. ದೃಷ್ಟಿ ದೋಷವುಳ್ಳ ಅನೇಕರು ಈಗಾಗಲೇ ಈ ಪುಸ್ತಕಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇವುಗಳ ಜೊತೆಗೆ ಈಗ ಶ್ರವ್ಯ ಪುಸ್ತಕಗಳನ್ನು ಕೂಡ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ.
ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಬೀಕನ್ ಗ್ರಂಥಾಲಯ ಒಳಗೊಂಡಂತೆ ಕನಿಷ್ಟ 25 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಸೂಕ್ತ ಮಾಹಿತಿಯನ್ನು ಒದಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಪಂಚಾಯತ್ ರಾಜ್ ಆಯುಕ್ತಾಲಯ ಸೂಚನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತು ಅಧಿಕಾರಿಗಳು ಸದ್ಯದಲ್ಲೇ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಬೀಕನ್ ಹಾಗೂ ಗ್ರಂಥಾಲಯಗಳ ಡಿಜಿಟಲೀಕರಣ ಕುರಿತು ಚರ್ಚೆಗೆ ಬರಲಿವೆ ಎಂದು ತಿಳಿದುಬಂದಿದೆ.