ಬೆಂಗಳೂರು: ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರ್ಕಾರದ ಮನವೊಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಬಂದ್ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಜನರ ಆಕ್ರೋಶ ಕಟ್ಟೆ ಒಡೆದಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ ಎಂದರು.
ರಾಜ್ಯದಲ್ಲಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ನಾವು ಸರ್ಕಾರದಲ್ಲಿ ಇದ್ದಾಗ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿರಲಿಲ್ಲ. ಮುಖ್ಯಮಂತ್ರಿಗಳು ಪ್ರತಿಭಟನೆ ಹತ್ತಿಕ್ಕುವುದಿಲ್ಲ ಅಂತ ಹೇಳಿದ್ದರು. ಆದರೆ, ಎಲ್ಲ ಕಡೆ ಪ್ರತಿಭಟನಾಕಾರರನ್ನು ಬೆಳಗ್ಗೆಯಿಂದಲೇ ಬಂಧಿಸುವ ಕೆಲಸ ಮಾಡಿದ್ದಾರೆ. ಇದರ ನಡುವೆ ಹೋರಾಟಗಾರರೂ ಯಶಸ್ವಿಯಾಗಿ ಬಂದ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ಒಗ್ಗಟ್ಟಿನ ಅಗತ್ಯ ಇತ್ತು. ಜನ ಮತ್ತು ಸಂಘಟನೆಗಳು ಒಗ್ಗಟ್ಟಿನಿಂದ ಬಂದ್ ಯಶಸ್ವಿ ಮಾಡಿವೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಕಾಂಗ್ರೆಸ್ನವರು ರಾಜಕಾರಣಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಆಗ ನಾವು ನಿಮಗೆ ಸಮಾವೇಶ ಮಾಡಲು ಅವಕಾಶ ಕೊಟ್ಟಿದ್ದೆವು. ಈಗ ಫ್ರೀಡಂ ಪಾರ್ಕ್ವರೆಗೂ ಹೊರಾಟಗಾರರು ಜಾಥಾ ನಡೆಸಲು ಬಿಡುತ್ತಿಲ್ಲ. ಸರ್ಕಾರ ಪೊಲೀಸರ ಮೂಲಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರೈತರು ರಾಜಕಾರಣ ಮಾಡುತ್ತಾರಾ?: ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದವರು, ಕನ್ನಡ ಸಂಘದವರು ರಾಜಕಾರಣ ಮಾಡುತ್ತಾರಾ? ನಿಮ್ಮ ಒಕ್ಕೂಟದ ಸ್ನೇಹಿತರ ಹಿತ ಕಾಯುವುದನ್ನು ಬಿಟ್ಟು ರಾಜ್ಯದ ಹಿತ ಕಾಯಿರಿ. ಇವರು ತಮಿಳುನಾಡಿಗೆ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ಥಿಕೆ ಕೇಳಿದರೆ ಅದನ್ನು ಹೇಗೆ ಮಾಡಲು ಸಾಧ್ಯವಿದೆ. ತಮಿಳುನಾಡು ಇಂಡಿಯಾದಲ್ಲಿದೆ. ಕಾಂಗ್ರೆಸ್ ಮಿತ್ರ ಪಕ್ಷವಾಗಿದೆ. ಸೋನಿಯಾಗಾಂಧಿ ಖರ್ಗೆ ಅವರನ್ನು ಕರೆಯಿಸಿ ಮಾತನಾಡಿಸಲಿ. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಮಾತುಕತೆಗೆ ಒಪ್ಪಿಸಲಿ ಎಂದು ಹೇಳಿದರು.
ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದಾರೆಂದು ಕೇಳಿದ ಪ್ರಶ್ನೆಗೆ ಅವರು, ನೇರವಾಗಿ ಮಧ್ಯ ಪ್ರವೇಶ ಮಾಡಿ ಅಂತ ಹೇಳಲಿ, ಕಾವೇರಿ ಟ್ರಿಬ್ಯುನಲ್ ಆದೇಶ ಆದ ಮೇಲೆ, ಸುಪ್ರೀಂನಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಹಿಂದಿನ ಪ್ರಧಾನಿ ಮಧ್ಯಪ್ರವೇಶ ಮಾಡಿದ್ದರು ಎಂದರು.
ಡಿಸಿಎಂ ಹೇಳಿಕೆಯ ಔಚಿತ್ಯವೇನು?: ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಸಿಡಬ್ಲ್ಯೂಆರ್ಸಿಯಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಆರ್ಎಸ್ಗೆ 10 ಸಾವಿರ ಕ್ಯೂಸೆಕ್ ಒಳ ಹರಿವು ಇದೆ ಎಂದು ಹೇಳುವ ಉದ್ದೇಶವೇನಿತ್ತು. ಇವರ ಹೇಳಿಕೆಯಿಂದ ಸಿಡಬ್ಲ್ಯೂಆರ್ಸಿ ಮೇಲೆ ಪರಿಣಾಮ ಬೀರುವುದಿಲ್ಲವೇ, ಇವರ ಈ ರೀತಿಯ ಹೇಳಿಕೆಯಿಂದಲೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸಿಡಬ್ಲ್ಯೂಆಎರ್ಸಿ ಮತ್ತೆ ಪ್ರತಿದಿನ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿದ್ದು, ಅವರದು ಏನೇ ಆದೇಶ ಬಂದರೂ ಕೂಡ ರಾಜ್ಯ ಸರ್ಕಾರ ಅದನ್ನು ಒಪ್ಪಬಾರದು. ತಕ್ಷಣ ಸುಪ್ರೀಂ ಕೋರ್ಟ್ಗೆ ಐಎ ಹಾಕಬೇಕು.
ಸಿಡಬ್ಲ್ಯೂಎಂಎ, ಸಿಡಬ್ಲ್ಯೂಆಎರ್ಸಿ ಆದೇಶ ವೈಜ್ಞಾನಿಕವಾಗಿಲ್ಲ. ಅವರು ವಸ್ತುಸ್ಥಿತಿ ಅರಿತು ಆದೇಶ ಮಾಡಬೇಕು. ಅದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ನಾಯಕತ್ವ ಸರಿಯಾದ ಲೀಡ್ ತೆಗೆದುಕೊಳ್ಳಬೇಕು. ಇವರು ಹಗುರವಾಗಿ ತೆಗೆದುಕೊಂಡಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಾವೇ ಐಎ ಹಾಕಿದರೆ ನಮ್ಮ ಪರಿಸ್ಥಿತಿ, ಅವರ ಪರಿಸ್ಥಿತಿ ಏನಿದೆ ಅಂತ ಹೇಳಲು ಹೆಚ್ಚು ಅವಕಾಶ ಇರುತ್ತದೆ ಎಂದರು.
ಬೀದಿಗಿಳಿದು ಹೋರಾಟ: ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿ ಸೇರಿದಂತೆ ರೈತರು ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ ಆಚರಣೆ ಮಾಡಿದ್ದೇವೆ. ಆದರೆ, ಈ ಸರ್ಕಾರ ಕೇಳುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶ ಸುಪ್ರೀಂ ಕೋರ್ಟ್ಗೆ ತಲುಪಿಸಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಸರ್ಕಾರ ಕಡಿಮೆ ನೀರು ಹರಿಸುವಂತೆ ಮಾಡಿಸಿದ್ದೇವೆ ಎನ್ನಲು ಇದೇನು ಬಟ್ಟೆ ವ್ಯಾಪಾರವೇ ಇದು ಕಾವೇರಿ ನೀರಿನ ಸಮಸ್ಯೆ ಇದು ಗಂಭೀರವಾದ ವಿಚಾರ ಎಂದು ಹೇಳಿದರು.
ಇನ್ನು ರಾಜ್ಯದ ಪರ ವಾದ ಮಾಡುತ್ತಿರುವ ವಕೀಲರನ್ನು ಬದಲಾಯಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಕೀಲರ ತಂಡ ಬದಲಾವಣೆ ಮಾಡುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು, ಅವರ ನಡುವೆ ಏನು ಮಾತುಕತೆಯಾಗಿದೆಯೋ ಗೊತ್ತಿಲ್ಲ ಎಂದರು.
ಮದ್ಯದ ದರ ಹೆಚ್ಚಳದಿಂದ ಆದಾಯ ಕಡಿಮೆಯಾಗಿದೆ: ರಾಜ್ಯ ಸರ್ಕಾರ ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರಿಂದ ಅಬಕಾರಿ ಆದಾಯ ಕಡಿಮೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮದ್ಯದ ದರ ಹೆಚ್ಚಳವಾಗಿದೆ. ಹೀಗಾಗಿ ಗೋವಾ ಹಾಗೂ ಮಹಾರಾಷ್ಟ್ರದಿಂದ ಅಕ್ರಮ ಮದ್ಯ ಸರಬರಾಜಾಗುತ್ತಿದೆ. ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯ ಮಾರಾಟ ಮಾಡಲು ಹೊರಟಿದ್ದು ದುರದೃಷ್ಟಕರ, ಇವರು ಮದ್ಯದ ಬೆಲೆ ಹೆಚ್ಚಳ ಮಾಡಿದ್ದರಿಂದ ಆದಾಯ ಕಡಿಮೆಯಾಗಿದೆ. ಇವರು ಗೃಹಲಕ್ಷ್ಮಿಗೆ ನೀಡಿದ ಹಣವನ್ನು ವಾಪಸ್ ಪಡೆಯಲು ಈ ಮಾರ್ಗ ಅನುಸರಿಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯ ಹದಗೆಡಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಈ ತೀರ್ಮಾನ ಹಿಂಪಡೆಯಬೇಕು. ರಾಜ್ಯದಲ್ಲಿ ದರ ಹೆಚ್ಚಳ ಮಾಡಿರುವುದರಿಂದ ಮಹಾರಾಷ್ಟ್ರ ಮತ್ತು ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ. ಇದರಿಂದ ಕುಟುಂಬಗಳು ಹಾಳಾಗುತ್ತವೆ. ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ವಿರೋಧಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಾವೇರಿ ನೀರು ಪರಿಶೀಲನೆಗೆ ಕೇಂದ್ರದಿಂದ ತಜ್ಞರ ತಂಡ ಕಳುಹಿಸಲು ಜಲಸಂಪನ್ಮೂಲ ಸಚಿವರು ಭರವಸೆ: ಶೋಭಾ ಕರಂದ್ಲಾಜೆ