ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಪೌಲ್ ವಿರುದ್ಧ ಸಿಐಡಿ ಪೊಲೀಸರು 1,406 ಪುಟಗಳ ಹೆಚ್ಚುವರಿ ಚಾರ್ಜ್ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪೈಕಿ 38 ಸಾಕ್ಷಿದಾರರ ಹೇಳಿಕೆ, 78 ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದರು. ಪಿಎಸ್ಐ ಆಭ್ಯರ್ಥಿಗಳಿಂದ ಹಣ ಪಡೆದು ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಸಿಐಡಿ ಬಂಧಿಸಿತ್ತು.
ಸುಮಾರು 1.30 ಕೋಟಿ ಹಣ ಪಡೆದು ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ನಲ್ಲಿ ಉತ್ತರ ಪತ್ರಿಕೆಗಳನ್ನು ತಿದ್ದಲು ಸಹಕರಿಸಿದ್ದಾರೆ ಎಂಬ ಆರೋಪ ಪೌಲ್ ಮೇಲಿದೆ. ಈ ಸಂಬಂಧ ನೇಮಕಾತಿ ವಿಭಾಗದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್, ಸಿಬ್ಬಂದಿಗಳಾದ ಹರ್ಷ, ಶ್ರೀಧರ್ನನ್ನು ಸಹ ಸಿಐಡಿ ಬಂಧಿಸಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೇ ತಿಂಗಳಲ್ಲಿ 4 ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ