ಬೆಂಗಳೂರು : ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲು ಸರ್ಕಾರಕ್ಕೆ ತಗುಲಬಹುದಾದ ಆರ್ಥಿಕ ವೆಚ್ಚವನ್ನು ಅಂದಾಜಿಸಲು ಸಮಿತಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 7 ಮಂದಿ ಅಧಿಕಾರಿಗಳ ಸಮಿತಿ ರಚನೆ ಮಾಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಅಪರ ಆಯುಕ್ತರು, ಧಾರವಾಡದ ಅಪರ ಆಯುಕ್ತರು, ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು, ಸರ್ಕಾರದ ಉಪಕಾರ್ಯದರ್ಶಿ, ಪ್ರೌಢಶಿಕ್ಷಣ ನಿರ್ದೇಶಕರು ಸಮಿತಿಯ ಸದಸ್ಯರಾಗಿರಲಿದ್ದಾರೆ.
ಜ. 20, 2023 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಜೊತೆಗಿನ ಸಭೆಯಲ್ಲಿ ಹಲವಾರು ದಿನಗಳಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಇದಕ್ಕೆ ತಗಲುವ ಆರ್ಥಿಕ ವೆಚ್ಚವನ್ನು ಲೆಕ್ಕಹಾಕಲು ಒಂದು ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದ್ದರು. ಅದರನ್ವಯ ಇದೀಗ ಸಮಿತಿ ರಚಿಸಿ ಆದೇಶಿಸಲಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿ ಬಗ್ಗೆ ಯೋಜನೆ: ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಅನುದಾನರಹಿತ ಸೇವೆಯನ್ನು ಪರಿಗಣಿಸಿ ಕಾಲ್ಪನಿಕ ವೇತನ ಜಾರಿಗೊಳಿಸುವ ಬಗ್ಗೆ, ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ಜಾರಿಗೆ ತರುವ ಬಗ್ಗೆ ಹಾಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ನಿಖರವಾದ ಮಾಹಿತಿ ಮತ್ತು ದತ್ತಾಂಶಗಳನ್ನು ಕ್ರೂಢೀಕರಿಸಲು ಸಮತಿಗೆ ಸೂಚಿಸಲಾಗಿದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗೆ ಸರ್ಕಾರ ಸ್ಪಂದನೆ: ಜೊತೆಗೆ ಇದರಿಂದ ಸರ್ಕಾರಕ್ಕೆ ತಗುಲಬಹುದಾದ ಆರ್ಥಿಕ ವೆಚ್ಚವನ್ನು ಅಂದಾಜಿಸಿ 30 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ವೇತನ ಭತ್ಯೆ ತಾರತಮ್ಯ ಸರಿಪಡಿಸಲು ಅಗತ್ಯವಾದ ಆರ್ಥಿಕ ವೆಚ್ಚಗಳನ್ನು ಅಂದಾಜಿಸಲು ಸೂಚಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ ಮತ್ತು ಭತ್ಯೆಗಳ ತಾರತಮ್ಯಕ್ಕೆ ಮುಕ್ತಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
15 ಸಾವಿರ ಶಿಕ್ಷಕರ ನೇಮಕಾತಿ: ಮುಂದಿನ 15 ದಿನದೊಳಗೆ 15 ಸಾವಿರ ಶಿಕ್ಷಕರ ನೇಮಕಾತಿ ಅಂತಿಮ ಪ್ರಕ್ರಿಯೆ ನಡೆಯುತ್ತದೆ. 15,000 ಶಿಕ್ಷಕರ ಸಿಇಟಿ ಈಗಾಗಲೇ ಆಗಿದೆ. ಕಾನೂನು ಕಾರಣಕ್ಕಾಗಿ ಸ್ವಲ್ಪ ವಿಳಂಬವಾಗಿದೆ. ಈ ಹಿಂದೆ ರಾಜ್ಯದಲ್ಲಿದ್ದ ಸರ್ಕಾರ ಐದು ವರ್ಷದಲ್ಲಿ ಕೇವಲ 3,517 ಕೊಠಡಿಗಳನ್ನು ಕಟ್ಟಿದೆ. 5,600 ಕೊಠಡಿಗಳನ್ನು ದುರಸ್ತಿ ಮಾಡಿದ್ದಾರೆ. ನಾವು ಕೇವಲ ಮೂರು ವರ್ಷದಲ್ಲಿ ಸುಮಾರು 22,000 ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. 1 ಲಕ್ಷಕ್ಕೂ ಮಿಕ್ಕಿ ಕೊಠಡಿಗಳನ್ನು ದುರಸ್ತಿ ಮಾಡಿದ್ದೇವೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಅವರು ಕಡಬದಲ್ಲಿ ಹೇಳಿದ್ದರು.
ಓದಿ: ಮುಂದಿನ 15 ದಿನದೊಳಗೆ 15 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್