ಬೆಂಗಳೂರು: 'ಕಾಂತಾರ' ಚಿತ್ರದ ಮೂಲಕ ಭೂತಾರಾಧನೆ ವಿಶ್ವದ ಮೂಲೆ ಮೂಲೆಯಲ್ಲಿ ಸುದ್ದಿಯಾದ ಬೆನ್ನಲ್ಲೇ ಭೂತಾರಾಧನೆ ಮಾಡುವ ದೈವನರ್ತಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೈವ ನರ್ತನ ಮಾಡುವ 60 ವರ್ಷ ತುಂಬಿದ ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳ ಮಾಸಾಶನ ನೀಡುವ ತೀರ್ಮಾನ ಪ್ರಕಟಿಸಿದೆ.
ನಗರದ ವೈಯಾಲಿಕಾವಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ದೈವ ನರ್ತನೆ, ಭೂತಾರಾಧನೆ ಮಾಡುವವರ ದೊಡ್ಡ ಸಂಖ್ಯೆಯೇ ಇದೆ. ಪ್ರತಿ ವರ್ಷ ದೈವಾರಾಧನೆ ಮಾಡಿಕೊಳ್ಳುತ್ತಲೇ ತಮ್ಮ ಕಸುಬು ನಡೆಸುತ್ತಿರುವ ಜನ ಇದ್ದಾರೆ. ಹಾಗಾಗಿ ದೈವ ನರ್ತನ ಮಾಡುತ್ತಿರುವ 60 ವರ್ಷ ಮೀರಿದವರಿಗೆ ಮಾಸಾಶನ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು: ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು ಎಂದು ನಟ ಚೇತನ್ಗೆ ಟಾಂಗ್ ನೀಡಿದ ಸಚಿವ ಸುನೀಲ್ ಕುಮಾರ್, ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ, ನಮ್ಮ ನಂಬಿಕೆ, ಶ್ರದ್ಧೆಯ ಪ್ರಶ್ನೆ. ತುಳುನಾಡಿನ ಜನರು ಭಾವನಾತ್ಮಕವಾಗಿ ಎಲ್ಲ ಸಂದರ್ಭದಲ್ಲಿಯೂ ಈ ಸಂಬಂಧವನ್ನು ಜೋಡಿಸಿಕೊಂಡಿದ್ದಾರೆ. ದೈವಾರಾಧನೆ, ದೈವಗಳಿಗೆ ನಡೆದುಕೊಳ್ಳುವ ಮೂಲಕವೇ ಆ ಭಾಗದಲ್ಲಿ ನಮ್ಮ ದಿನಚರಿ ಆರಂಭವಾಗುತ್ತದೆ ಎಂದು ಹೇಳಿದರು.
ಅಂತಹ ದೈವಾರಾಧನೆ ಬಗ್ಗೆ ಯಾರೂ ಕೂಡ ಬೇರೆ ಅರ್ಥದಲ್ಲಿ ನೋಡಬಾರದು, ತಪ್ಪು ಅರ್ಥದಲ್ಲಿ ಅರ್ಥೈಸಬಾರದು. ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬವದು. ತಲತಲಾಂತರದಿಂದ ಅದನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದರೆ, ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗ. ದೈವ ನರ್ತನೆ ಹಿಂದೂ ಸಂಸ್ಕೃತಿಯ ಭಾಗ. ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ ಎಂದರು.
ತುಳುನಾಡಿನ ಜನತೆ ಸಂಸ್ಕೃತಿಯನ್ನು ದೀಪಾರಾಧನೆ ಮಾಡುವ ಮೂಲಕ ದೈವಾರಾಧನೆ ಮಾಡುತ್ತಾರೆ, ನಾಗಾರಾಧನೆ ಮಾಡುತ್ತಾರೆ ಎಂದರೆ ಒಂದೊಂದು ಕಡೆ ಹಿಂದೂ ಸಂಸ್ಕೃತಿಯ ಚಟುವಟಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಎಲ್ಲ ಚಟುವಟಿಕೆಗಳು ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗ ಎಂದು ತಿರುಗೇಟು ನೀಡಿದರು.
ಭಾರತ ಇಸ್ಲಾಮೀಕರಣ ಮಾಡಲು ಸಾಧ್ಯವಿಲ್ಲ: ಪಿಎಫ್ಐ ಹದ್ದುಬಸ್ತಿನಲ್ಲಿಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಪಿಎಫ್ಐ ಸಂಘಟನೆ ನಿಷೇಧಿಸಿದ ನಂತರ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ಅದು ಭಾರತವನ್ನು ಇಸ್ಲಾಮೀಕರಣ ಮಾಡುವಂತಹ ದೊಡ್ಡ ಸಂಚು ಮಾಡಿತ್ತು. ರಾಮಮಂದಿರ ದ್ವಂಸ ಮಾಡುತ್ತೇವೆ ಎಂದು ಅಜೆಂಡಾದಲ್ಲಿರುವ ಕಾರ್ಯತಂತ್ರವನ್ನು ನಮ್ಮ ಎನ್ಐಎ ತಂಡ ವಿಫಲಗೊಳಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದು ಹಂತದಲ್ಲಿ ತುಷ್ಟೀಕರಣದ ರಾಜಕಾರಣಕ್ಕೆ ಪಿಎಫ್ಐ ಅನ್ನು ದೇಶದಲ್ಲಿ ಬೆಂಬಲಿಸಲಾಗುತ್ತಿದೆ.
ಹಿಂಸೆ ಮಾಡುವವರು, ಸಮಾಜ ವಿರೋಧಿಗಳನ್ನು ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸುವವರೆಗೂ ಇಂತಹ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ. ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಸಾಧ್ಯವಿಲ್ಲ. ಇದು ಹಿಂದೂ ರಾಷ್ಟ್ರ, ಇದು ಈ ನೆಲದ ಗುಣ. ಪಿಎಫ್ಐನ ಎಲ್ಲ ಹುನ್ನಾರಗಳನ್ನು ಕೇಂದ್ರ ಸರ್ಕಾರ, ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ರಾಜ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಹತೋಟಿಗೆ ತರುವ ಕೆಲಸವನ್ನು ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಮಾಡಲಿದೆ ಎಂದರು.
ಬಿಜೆಪಿಯಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ: 24 ವರ್ಷದ ನಂತರ ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. 82 ವರ್ಷದ ನಾಯಕನ ಆಯ್ಕೆ ಮಾಡಿ ಯುವ ನಾಯಕತ್ವದ ಬಗ್ಗೆ ಮಾತನಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಈ ವಿಚಾರದಲ್ಲಿ ನಮಗೆ ಯಾವುದೇ ವಿವಾದಗಳಿಲ್ಲ. ಆದರೆ ಅವರ ಆಯ್ಕೆ ಕುಟುಂಬ ರಾಜಕಾರಣ ಬೆಂಬಲದಿಂದ ಆಗಿದೆ. ಶಶಿತರೂರ್ ಅವರೇ ಚುನಾವಣೆ ಪ್ರಕ್ರಿಯೆ ಪ್ರಶ್ನೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ ಎಂದು ಎಐಸಿಸಿ ಚುನಾವಣಾ ಪ್ರಕ್ರಿಯೆಯನ್ನು ಸುನೀಲ್ ಕುಮಾರ್ ಪ್ರಶ್ನಿಸಿದರು.
ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಈ ರೀತಿಯ ಬದಲಾವಣೆ ನಡೆಯುತ್ತಿದೆ. ಸಾಮಾನ್ಯ ಕಾರ್ಯಕರ್ತ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷ ಆಯ್ಕೆಯಾಗುತ್ತಾನೆ. ಸಾಮಾನ್ಯರೂ ಪ್ರಧಾನಿಯಾಗುವ ಆಂತರಿಕ ಪ್ರಜಾಪ್ರಭುತ್ವ ನಮ್ಮ ಪಕ್ಷದಲ್ಲಿ ಮಾತ್ರ ಇದೆ ಎಂದರು.
ಇದನ್ನೂ ಓದಿ: ಸಚಿವ ಸಂಪುಟ ಸಭೆ: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳದ ಸುಗ್ರೀವಾಜ್ಞೆಗೆ ಅಸ್ತು ಸಾಧ್ಯತೆ