ಬೆಂಗಳೂರು: ಚುನಾವಣೆ ವೇಳೆ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವುದೇ ಕಾರಣಕ್ಕೂ ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ ಯೋಜನೆ (ಎಸ್ಸಿಪಿ/ಟಿಎಸ್ಪಿ) ಹಣ ಬಳಕೆ ಮಾಡಬಾರದು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಾಡಿನ ಜನತೆಗೆ ಐದು ಭರವಸೆ ನೀಡಿ ರಾಜ್ಯದ ಜನತೆಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಆವತ್ತೇ ಗ್ಯಾರಂಟಿ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಬೇಕು ಅಂತಾ ಹೇಳಿದ್ದರು. ಪಕ್ಷ ಅಧಿಕಾರಕ್ಕೆ ಬಂದಾಗ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಘೋಷಣೆ ಮಾಡುತ್ತೇವೆ ಎಂದಿದ್ದರು. ಆದರೆ, ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಮೊದಲ ಕ್ಯಾಬಿನೆಟ್ನಲ್ಲಿಯೇ ಘೋಷಣೆ ಮಾಡಬಹುದಿತ್ತಲ್ವಾ? ಯಾಕೆ ಘೋಷಣೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
![ಆದೇಶ ಪ್ರತಿ](https://etvbharatimages.akamaized.net/etvbharat/prod-images/kn-bng-05-government-order-script-7208083_31052023134102_3105f_1685520662_1023.jpg)
ಮೊದಲು 60 ವರ್ಷಗಳ ಕಾಲ ದೇಶದ ಜನರಿಗೆ ಮೋಸ ಮಾಡಿದರು. ಗರೀಬಿ ಹಟಾವೋ ಮಾಡುತ್ತೇವೆ ಅಂತ ಹೇಳಿ ಈವರೆಗೂ ಮಾಡಿಲ್ಲ. ಈಗ ಉಚಿತ ಭರವಸೆಗಳ ನೀಡಿದ್ದಾರೆ. ಅಂದು ಪ್ರತಿ ಮಹಿಳೆಗೆ 2 ಸಾವಿರ ರೂಪಾಯಿ ಅಂತ ಹೇಳಿದ್ದರು. ಆದರೆ, ಇವತ್ತು ಅತ್ತೆಗೆ ಮಾತ್ರ 2 ಸಾವಿರ ರೂಪಾಯಿ ಕೊಡುತ್ತೇವೆ ಅಂತ ಹೇಳ್ತಾರೆ. ಯಾವುದೇ ಕಂಡೀಷನ್ ಇಲ್ಲದೇ ಪ್ರತಿ ಕುಟುಂಬದ ಯಜಮಾನಿಗೆ 2 ರೂಪಾಯಿ ಕೊಡಲೇಬೇಕು.
ಯುವ ನಿಧಿಯಲ್ಲಿ 2022 ಹಾಗೂ 23ರಲ್ಲಿ ಪಾಸಾದವರಿಗೆ ಮಾತ್ರವೇ ಹಣ ಸಿಗಲಿದೆ ಅಂತಾರೆ. ಪ್ರತಿಯೊಬ್ಬ ಪಾಸ್ ಆದ ಪದವೀಧರರು ಹಾಗೂ ಡಿಪ್ಲೋಮಾ ಪದವಿದಾರರಿಗೂ ಹಣ ಕೊಡಲೇಬೇಕು. ಸರಿ ಸುಮಾರು 60 ಲಕ್ಷ ಪದವೀಧರರು ಇದ್ದಾರೆ. ಎಲ್ಲರಿಗೂ ಕೊಡಬೇಕು. ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಎಂದು ಹೇಳಿ ಈಗ ಈಗ ಷರತ್ತು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮಾತಿಗೆ ತಪ್ಪಬಾರದು. ನಾಡಿನ ಜನರು ವಿಶ್ವಾಸದಿಂದ ಕಾಯುತ್ತಿದ್ದಾರೆ. 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿ ಈಗ ಕೇಂದ್ರ ಸರ್ಕಾರದಿಂದ ಕೇಳುತ್ತೇವೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿಯೇ ಸಾಕಷ್ಟು ಅಕ್ಕಿ ಇದೆ. ಖರೀದಿಸಿ ಕೊಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದರು.
ಹಿಂದೆ ಕೂತವನಿಗೂ ಫ್ರೀ ಮುಂದೆ ಕೂತವನಿಗೂ ಫ್ರೀ ಮಹಾದೇವಪ್ಪ ನಿನಗೂ ಫ್ರೀ ನನಗೂ ಫ್ರೀ ಎಂದು ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಟ್ಯಾಕ್ಸ್ ಪೇಯರ್. ಅವರಿಗೂ ಫ್ರೀ ಎಂದ ಮೇಲೆ ಎಲ್ಲರಿಗೂ ಕೊಡಬೇಕು. ಮೋಸದಾಟ ಮಾಡಿದರೆ ನಾಡಿನ ಜನತೆ ಇವರಿಗೆ ರಸ್ತೆ ಮೇಲೆ ಓಡಾಡೋಕೆ ಬಿಡಲ್ಲ. ನನಗೆ ಮಾಹಿತಿ ಇರುವ ಪ್ರಕಾರ ನನಗೆ ಮಾಹಿತಿ ಇರುವ ಪ್ರಕಾರ ಎಸ್ಸಿಪಿ/ಟಿಎಸ್ಪಿ ಹಣದಲ್ಲಿ 5 ಗ್ಯಾರಂಟಿ ಯೋಜನೆ ಕೊಡುತ್ತಾರೆ ಅಂತ ಇದೆ. ಅದು ಹಿಂದುಳಿದಿರುವ ಅಭಿವೃದ್ಧಿಗೆ ಇಟ್ಟಿರುವ ಹಣಕಾಸು. ಆ ಹಣವನ್ನು ಸರ್ಕಾರ ಬಳಸಬಾರದು. 70 ಸಾವಿರ ಕೋಟಿ ರೂಪಾಯಿ ಆಗಬಹುದು. ನೋಡೋಣ ನಾಳೆ ಕಾಂಗ್ರೆಸ್ ಹೇಗೆ ಕೋಡ್ತಾರೆ ಅಂತಾ ಎಂದರು.
ಹಣಕಾಸು ಇಲಾಖೆಯ ವಿಶೇಷಾಧಿಕಾರಿಯಾಗಿ ಎಲ್.ಕೆ.ಅತೀಕ್ ನೇಮಕ: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಹಣಕಾಸು ಇಲಾಖೆಯ ವಿಶೇಷಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯ ವಿಶೇಷ ಅಧಿಕಾರಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ಎಲ್.ಕೆ. ಅತೀಕ್ ಅವರಿಗೆ ನೀಡಲಾಗಿದೆ.
ಇದನ್ನೂ ಓದಿ: 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಚಿವರ ಸಭೆ ಕರೆದ ಸಿಎಂ ಸಿದ್ದರಾಮಯ್ಯ