ಬೆಂಗಳೂರು: ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಿದ್ದು, ಸದನದ ಮಧ್ಯ ಪ್ರವೇಶಿಸುವ ಅಧಿಕಾರ ಅವರಿಗಿಲ್ಲ. ಅವರು ಬಿಜೆಪಿ ಸರ್ಕಾರದ ಏಜೆಂಟ್ ಆಗಿದ್ದಾರೆ, ರಾಜಭವನ ಬಿಜೆಪಿ ಆಫೀಸ್ ಆಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಿಡಿಕಾರಿದರು.
ಕಾಂಗ್ರೆಸ್ ಶಾಸಕರು ತಂಗಿದ್ದ ತಾಜ್ ಹೋಟೆಲ್ ಬಳಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ವ್ಯಾಲಿಡ್ ಪ್ರಶ್ನೆಯನ್ನೇ ಕೇಳಿದ್ದಾರೆ. ನಮ್ಮ ಶಾಸಕರಿಗೆ ನಾವು ವಿಪ್ ಕೊಟ್ಟಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಅತೃಪ್ತರು ಹಾಜರಾಗಬೇಕೆಂದೇನಿಲ್ಲ ಎಂದು ಹೇಳಿದೆ. ಇದು ಸ್ಪಷ್ಟವಾಗಬೇಕು. ಅತೃಪ್ತ ಶಾಸಕರು ಬಂದರೆ ಒಳ್ಳೆಯದು ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಬಿಜೆಪಿ ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ. ಎಲ್ಲರೂ ಹೋರಾಟ ಮಾಡಿ ಪ್ರಜಾಪ್ರಭುತ್ವ ಉಳಿಸಬೇಕು. ನಮ್ಮ ಶಾಸಕರಿಗೆ ಬಿಜೆಪಿಯವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದರು.