ಬೆಂಗಳೂರು: ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಜನರಿಗೆ ನಿವೇಶನ ಮತ್ತು ಮನೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೆ ಜನರಿಗೆ ನಿವೇಶನ ಹಾಗೂ ಮನೆ ನೀಡಲು ಗೃಹ ಮಂಡಳಿಯ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸದಿರಲು ತೀರ್ಮಾನಿಸಲಾಗಿದೆ. ಭೂಸ್ವಾಧೀನ ಕಾರ್ಯದಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಕಿರಿಕಿರಿಯನ್ನು ಭರಿಸಿಕೊಳ್ಳುವುದು ಕಷ್ಟ. ಹೀಗಾಗಿ ಜನರಿಗೆ ನಿವೇಶನ ಹಂಚಿಕೆ ಮಾಡಲು, ಮನೆ ನಿರ್ಮಿಸಿಕೊಡಲು ಸರ್ಕಾರ ತಯಾರಿಲ್ಲ.
ಇದೇ ಕಾರಣಕ್ಕಾಗಿ ಕಳೆದ ಹಲವು ಕಾಲದಿಂದ ಜನರಿಗೆ ಮನೆ,ನಿವೇಶನ ನೀಡುವ ಕೆಲಸವಾಗಿರಲಿಲ್ಲ. ಇಷ್ಟಾದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 65 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಜನರಿಗೆ ಅಂತಿಮ ಕಂತಿನಲ್ಲಿ ಆರು ಸಾವಿರ ನಿವೇಶನಗಳನ್ನು ಒದಗಿಸಲು ತೀರ್ಮಾನಿಸಿದೆ.
ಹಂಚಿಕೆಗೆ ಸಮಿತಿ ರಚನೆ: ಮೈಸೂರಿನ ಕೆ.ಆರ್.ಎಸ್. ನಿಸರ್ಗ ಬಡಾವಣೆಯಲ್ಲಿ 523 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಇದೇ ರೀತಿ ಬಳ್ಳಾರಿ, ಹರಿಹರ, ವಿಜಯಪುರ, ಗದಗ, ಹುನಗುಂದ ಸೇರಿದಂತೆ ರಾಜ್ಯದ ವಿವಿಧೆಡೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಒಟ್ಟು 6015 ನಿವೇಶನ ಮತ್ತು 20 ಮನೆಗಳನ್ನು ಜನರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ನಿವೇಶನ ಹಂಚಿಕೆ ಮಾಡಲು ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು, ಕೆ.ಆರ್.ಎಸ್ ನಿಸರ್ಗ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಿದೆ.
ಲಾಟರಿ ಮೂಲಕ ಆಯ್ಕೆ: ಆಯಾ ಬಡಾವಣೆಯಲ್ಲಿ ನಿವೇಶನಗಳನ್ನು ಕೋರಿ ಬಂದಿರುವ ಅರ್ಜಿಗಳನ್ನು ಸ್ಥಳದಲ್ಲೇ ಲಾಟರಿಯ ಮೂಲಕ ಹಂಚಿಕೆ ಮಾಡಲಿದೆ. ಇದೇ ರೀತಿ ತಾಲೂಕು ಮಟ್ಟದಲ್ಲಿ ರೈತರು ಒದಗಿಸುವ ಭೂಮಿಗೆ ಶೇ. 60:40 ರ ಅನುಪಾತದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ. 60 ರಷ್ಟು ಭೂಮಿಯನ್ನು ಸರ್ಕಾರ ಇಟ್ಟುಕೊಂಡು ಶೇ. 40 ರಷ್ಟು ಭೂಮಿಯನ್ನು ರೈತರಿಗೆ ಬಿಟ್ಟು ಕೊಡಲಿದೆ. ಕೇವಲ ಭೂ ಒಡೆಯರಾದ ರೈತರ ಜತೆ ಮಾತ್ರ ಸಹಭಾಗಿತ್ವ ಮಾಡಿಕೊಳ್ಳಲಾಗುವುದೇ ವಿನಃ ನಮ್ಮ ಬಳಿ ಭೂಮಿ ಇದೆ ಎಂದು ರೈತರಲ್ಲದವರದು ಮುಂದೆ ಬಂದರೆ ಅದನ್ನು ಒಪ್ಪಿಕೊಳ್ಳದಿರಲು ಸರ್ಕಾರ ನಿರ್ಧರಿಸಿದೆ.
ಎಸ್ಸಿ / ಎಸ್ ಟಿ 5 ಲಕ್ಷ ಪಾವತಿಸಬೇಕು: ಬೆಂಗಳೂರಿನಲ್ಲಿ ಆರ್ಥಿಕ ದುರ್ಬಲರಿಗೆ ಒದಗಿಸಲು ನಿರ್ಮಿಸಲಾಗುತ್ತಿರುವ ಒಂದು ಲಕ್ಷ ಮನೆಗಳಲ್ಲಿ 1967 ಮನೆಗಳನ್ನು ಒಂದು ತಿಂಗಳಲ್ಲಿ ಜನರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದೇ ರೀತಿ ಈ ವರ್ಷ ಜನರಿಗೆ ಇಪ್ಪತ್ತು ಸಾವಿರ ಮನೆಗಳನ್ನು ಮಂಜೂರು ಮಾಡುಲು ಚಿಂತನೆ ನಡೆದಿದೆ. ಪ್ರತಿ ಮನೆಗೆ ಸಾಮಾನ್ಯ ವರ್ಗದವರು ಆರೂವರೆ ಲಕ್ಷ ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ,ವರ್ಗದವರು ಐದು ಲಕ್ಷ ರೂಪಾಯಿ ಪಾವತಿಸಬೇಕು.
ಹುಡ್ಕೋದಿಂದ 500 ಕೋಟಿ ರೂ. ಸಾಲ ಪಡೆದು ಸರ್ಕಾರವೇ ಈ ಒಂದು ಲಕ್ಷ ಮನೆಗಳನ್ನು ನಿರ್ಮಿಸುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದು, ಹಂಚಿಕೆಗೂ ಮುನ್ನವೇ ಬಡವರಿಂದ ಮುಂಗಡವಾಗಿ ಹಣ ಪಡೆಯದಿರಲು ತೀರ್ಮಾನಿಸಲಾಗಿದೆ.
ರೈತರೇ ಮುಂದೆ ಬರಬೇಕುಮನೆ ಹಂಚಿಕೆಯಾದ ನಂತರ ಸದರಿ ಮನೆಯ ದಾಖಲೆಯನ್ನು ಬ್ಯಾಂಕುಗಳಲ್ಲಿ ಅಡಮಾನ ಇಡುತ್ತೇವೆ. ಮನೆ ಪಡೆದವರು ಈ ಸಾಲದ ಮೇಲಿನ ಕಂತು ಕಟ್ಟಿಕೊಂಡು ಹೋಗುತ್ತಾರೆ. ಮುಂದಿನ ದಿನಗಳಲ್ಲಿ ಗೃಹ ಮಂಡಳಿಯ ವತಿಯಿಂದ ಭೂ ಸ್ವಾಧೀನ ಮಾಡಿಕೊಂಡು ಜನರಿಗೆ ನಿವೇಶನ ಹಂಚಿಕೆ ಮಾಡುವ, ಮನೆ ನಿರ್ಮಿಸಿಕೊಡುವ ಕೆಲಸದಿಂದ ಹಿಂದೆ ಸರಿದರೂ,ನಿವೇಶನಗಳನ್ನು ಅಭಿವೃಧ್ಧಿ ಪಡಿಸಲು ರೈತರು ಸಹಭಾಗಿತ್ವ ನೀಡಿದರೆ ಅದನ್ನು ಒಪ್ಪಿಕೊಳ್ಳುವುದಾಗಿ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಕನಿಷ್ಠ 50 ಎಕರೆ ಭೂಮಿ ಒದಗಿಸಲು ರೈತರು ಸಜ್ಜಾದರೆ ಅಂತವರ ಜತೆ ಒಪ್ಪಂದ ಮಾಡಿಕೊಂಡು ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತೇವೆ. ಜಿಲ್ಲಾ ಮಟ್ಟದಲ್ಲಿ ಈ ಸಹಭಾಗಿತ್ವದಡಿ ಸರ್ಕಾರಕ್ಕೆ ಶೇಕಡಾ ಐವತ್ತರಷ್ಟು ಪಾಲು ನೀಡಬೇಕು,ಉಳಿದ ಐವತ್ತರಷ್ಟು ಭೂಮಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ಕೊಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮ್ನೆಸ್ಟಿ ಇಂಡಿಯಾಗೆ 51 ಕೋಟಿ ರೂ.: ಮಾಜಿ ಸಿಇಒ ಆಕರ್ ಪಟೇಲ್ಗೆ 10 ಕೋಟಿ ರೂ. ದಂಡ: ಕಾರಣ ?