ಬೆಂಗಳೂರು: ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ ನೀಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಚರ್ಮಗಂಟು ರೋಗದ ಹಾವಳಿ ಹೆಚ್ಚಾಗಿದ್ದು, ನೇರವಾಗಿ ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳ ಉತ್ಪಾದಕತೆ ಕುಂಠಿತವಾಗುತ್ತಿದೆ. ಇದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಧನ ನೀಡಲು ನಿರ್ಧರಿಸಿದೆ.
ಅದರಂತೆ ಚರ್ಮಗಂಟು ರೋಗದಿಂದ ಮರಣಿಸಿದ ಪ್ರತಿ ಕರುವಿಗೆ 5,000 ರೂ., ಪ್ರತಿ ಹಸುವಿಗೆ 20,000 ರೂ., ಪ್ರತಿ ಎತ್ತುಗಳಿಗೆ 30,000 ರೂ. ನಿಗದಿಗೊಳಿಸಲಾಗಿದೆ. ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರಬೇಕು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸಲಾಗುವುದಿಲ್ಲ.
ಪರಿಹಾರ ಧನವನ್ನು ಜಾನುವಾರು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ RTGS/NEFT ಮುಖಾಂತರ ನೇರವಾಗಿ ಪಾವತಿಸಲಾಗುತ್ತದೆ. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು ಹಾಗೂ ಯುಐಡಿ ಇಯರ್ ಟ್ಯಾಗ್ ಇರಬೇಕು. ಆಗಸ್ಟ್ 1ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಚರ್ಮಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಛಾಯಚಿತ್ರಗಳು ಲಭ್ಯವಿಲ್ಲದಿದ್ದಲ್ಲಿ, ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಫೋಟೋ ಒದಗಿಸುವಂತೆ ಒತ್ತಾಯಿಸುವಂತಿಲ್ಲ.
ಆಗಸ್ಟ್ 1ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಪಶುವೈದ್ಯಾಧಿಕಾರಿಗಳ ಗಮನಕ್ಕೆ ಬಾರದೇ ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿ ಅಂತ್ಯಕ್ರಿಯೆಗೊಂಡಿದ್ದರೆ, ಸ್ಥಳೀಯ ಪಶುವೈದ್ಯಾಧಿಕಾರಿಗಳು ಸಂಬಂಧಪಟ್ಟ ಗ್ರಾಮಪಂಚಾಯತಿ ಸದಸ್ಯರು ಹಾಗೂ ಮೂರು ಜನ ಸ್ಥಳೀಯ ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಬೇಕು. ಸದರಿ ಕಾಯಿಲೆಯಿಂದಲೇ ಜಾನುವಾರು ಮರಣ ಹೊಂದಿರುವುದಾಗಿ ಖಚಿತಪಟ್ಟಲ್ಲಿ ಅನುಬಂಧದಲ್ಲಿರುವಂತೆ ದೃಢೀಕರಣ ಪತ್ರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.