ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಿನಿಂದಲೇ ಶಾಲೆಗಳಲ್ಲಿ ದಾಖಲಾತಿ ಮಾಡಲು ಒಪ್ಪಿಗೆ ನೀಡಲಾಗಿದೆ. ಯಾವ ರೀತಿ ದಾಖಲಾತಿ ಮಾಡಬೇಕು, ಏನೆಲ್ಲಾ ಮಾರ್ಗಸೂಚಿ ಅನುಸರಿಸಬೇಕು ಎಂಬ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಾವು ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದೆವು. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೆ ವೇತನ ಸಮಸ್ಯೆ ಆಗಿದೆ. ಇವರಿಗೆ ತಲಾ 25 ಸಾವಿರ ರೂ. ಪರಿಹಾರ ಪ್ಯಾಕೇಜ್ಗೆ ಮನವಿ ಮಾಡಿದ್ದೇವೆ. ಆರ್ಟಿಇ ಅಡಿಯಲ್ಲಿ ಬರುವ ಬಾಕಿ ಹಣ ಕೊಡಲು ಮನವಿ ಮಾಡಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕ ಸಂಗ್ರಹಿಸಲು ಅವಕಾಶ ಕೊಡಲು ಮನವಿ ಮಾಡಿದ್ದೇವೆ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಸಂಬಳ ಕೇಳಿದ ತಕ್ಷಣ ನಿಮ್ಮ ಅವಶ್ಯಕತೆ ಇಲ್ಲ ಅಂತ ಆಡಳಿತ ಮಂಡಳಿಗಳು ಕೆಲ ಶಿಕ್ಷಕರನ್ನು ತೆಗೆದು ಹಾಕುತ್ತಿವೆ. ಆ ರೀತಿಯಲ್ಲಿ ಹೇಳುವುದಕ್ಕೆ ಬರುವುದಿಲ್ಲ. ಮಕ್ಕಳಿಗೆ ಜನ್ಮ ಕೊಡುವುದಕ್ಕೆ ಮಾತ್ರ ಅಧಿಕಾರ ಇದೆ. ಅವರ ಕುತ್ತಿಗೆ ಹಿಸುಕುವುದಕ್ಕೆ ಅಧಿಕಾರ ಇಲ್ಲ. ಕೆಲಸ ಮಾಡುವವರೆಲ್ಲರನ್ನು ಕಂಟಿನ್ಯೂ ಮಾಡಲೇಬೇಕು. ಮ್ಯಾನೆಜ್‌ಮೆಂಟ್ ಏನಾದ್ರು ಕೆಲಸದಿಂದ ಟೀಚರ್ಸ್ ಅಥವಾ ಸಿಬ್ಬಂದಿಯನ್ನು ತೆಗೆದ್ರೆ ಬಹಳ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಿಗೂ ಗುಡ್ ನ್ಯೂಸ್:
29 ಸಾವಿರ ಅತಿಥಿ ಉಪನ್ಯಾಸಕರಿಗೆ 5 ಸಾವಿರ ರೂ. ಹೆಚ್ಚು ಮಾಡುವುದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಭರವಸೆ ನೀಡಿದ್ದಾರೆ. ಡಿಪ್ಲೋಮಾ, ಐಟಿಐ, ಡಿಗ್ರಿ ಕಾಲೇಜುಗಳ ಗೆಸ್ಟ್ ಫ್ಯಾಕಲ್ಟಿಗಳಿಗೆ 5 ಸಾವಿರ ರೂ. ಹೆಚ್ಚು ಮಾಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.