ಬೆಂಗಳೂರು: ನಾವೆಲ್ಲಾ ಶಾಸಕರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಹೇಳಿಕೊಳ್ಳೋಕೂ ಆಗಲ್ಲ, ಬಿಡೋದಕ್ಕೂ ಆಗಲ್ಲ. ಅಂತಹ ಪರಿಸ್ಥಿತಿ ನಮ್ಮದಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಂದು ಮಾತನಾಡಿದರೆ ದೊಡ್ಡದಾಗುತ್ತದೆ. ಒಂದು ಮಾತು ಬಿಟ್ಟರೆ ಸಣ್ಣದಾಗುತ್ತದೆ. ನಾವು ಏನೇ ಮಾತನಾಡಿದರೂ ಕಷ್ಟ. ನಮಗೂ ಅನೇಕ ಸಮಸ್ಯೆಗಳಿವೆ. ಕ್ಷೇತ್ರಕ್ಕೆ ಹೋದರೆ ಕೆಲಸ ಆಗುತ್ತಿಲ್ಲವೆಂದು ಜನ ಬೈಯುತ್ತಾರೆ. ಇನ್ನು ಮಂತ್ರಿಗಳಿಗೆ ಹೇಳಿಕೊಳ್ಳೋಣವೆಂದರೆ ಅವರೇ ಸಿಗುತ್ತಿಲ್ಲ. ನಾವು ಮಾತನಾಡಿದರೆ ಬೇರೆ ಬೇರೆ ಬಣ್ಣ ಕಟ್ಟುತ್ತಾರೆ ಎಂದು ಸರ್ಕಾರದ ವಿರುದ್ಧ ಗೂಳಿಹಟ್ಟಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾವಿದ್ದೇವೆ. ನಾವು ಏನೇ ಮಾತನಾಡಿದರೂ ತಪ್ಪಾಗುತ್ತದೆ. ಅದಕ್ಕೆ ಜಿಲ್ಲಾವಾರು ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಆರ್ಥಿಕ ಸುಧಾರಣೆಯಲ್ಲಿ ರಾಜ್ಯ ದ್ವಿತೀಯ ಸ್ಥಾನದಲ್ಲಿದೆ: ಶಾಸಕ ಕುಮಾರ್ ಬಂಗಾರಪ್ಪ
ನಾನೂ ಸಹ ಸಚಿವಾಕಾಂಕ್ಷಿ. ನಾನು 2008ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯೇ. ಈಗಲೂ ಆಕಾಂಕ್ಷಿಯೇ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ದೆಹಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.