ಬೆಂಗಳೂರು: ಸಾರಿಗೆ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್ ನೀಡಿದೆ. ನಿಗಮದ ಸಮಸ್ತ ಸಿಬ್ಬಂದಿಗೆ ಅಕ್ಟೋಬರ್ನಿಂದ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿದೆ.
ಹೌದು, ಪ್ರತಿ ತಿಂಗಳು ವೇತನ ಯಾವಾಗ ಬರಲಿದೆ ಎಂದು ಕಾಯುವ ಪರಿಸ್ಥಿತಿಯಿಂದ ಇನ್ಮುಂದೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಕ್ತವಾಗಲಿದ್ದಾರೆ. ವೇತನಕ್ಕಾಗಿ ವಾರಗಟ್ಟಲೇ ಕಾಯುತ್ತಾ ಕುಟುಂಬ ನಿರ್ವಹಣೆಗೆ ಕಷ್ಟಪಡಬೇಕಾದ ಸ್ಥಿತಿಯನ್ನು ಎದುರಿಸುತ್ತಿರುವ ನಿಗದ ಸಿಬ್ಬಂದಿಯ ಕಷ್ಟವನ್ನು ಅರ್ಥಮಾಡಿಕೊಂಡು, ನಿಗಮ ಆರ್ಥಿಕ ಸಮಸ್ಯೆ ನಡುವೆಯೂ ಪ್ರತಿ ತಿಂಗಳು ಒಂದನೇ ತಾರೀಖಿನಂದೇ ಎಲ್ಲ ಸಿಬ್ಬಂದಿಗೆ ವೇತನ ಪಾವತಿ ಮಾಡುವ ವ್ಯವಸ್ಥೆ ಘೋಷಿಸಿದೆ.
ಸಾರಿಗೆ ಸಿಬ್ಬಂದಿಗೆ ವೇತನ ಪಾವತಿ: ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸಾರಿಗೆ ಸಂಸ್ಥೆಯ ಆತ್ಮವೇ ನಮ್ಮ ಕಾರ್ಮಿಕ ಬಂಧುಗಳು. ಅವರ ಕ್ಷೇಮಾಭಿವೃದ್ಧಿ, ಹಿತಾಸಕ್ತಿ ಕಾಪಾಡುವುದು ಹಾಗೂ ಅವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಅಕ್ಟೋಬರ್-2022 ತಿಂಗಳಿಂದ ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಮಸ್ತ ಸಿಬ್ಬಂದಿಗೆ ಪ್ರತಿ ತಿಂಗಳ 1 ರಂದೇ ವೇತನ ಪಾವತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ವ್ಯವಸ್ಥೆ ಪ್ರಕಾರ ಸಿಬ್ಬಂದಿ ವೇತನ ಬಿಲ್ಲುಗಳನ್ನು ತಯಾರಿಸುವಾಗ ಹಾಜರಾತಿ, ರಜೆ ಮಂಜೂರಾತಿ ಆದೇಶ, ಹೆಚ್ಚುವರಿ ಭತ್ಯೆ (OT) ಮುಂತಾದ ದಾಖಲಾತಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ವೇತನದ ಬಿಲ್ಲು ಸಿದ್ಧಪಡಿಸುವ ಅಗತ್ಯ ಇರುತ್ತದೆ.
ಆದ್ದರಿಂದ ನಮ್ಮ ಕಾರ್ಮಿಕ ಸಿಬ್ಬಂದಿ ವೇತನ ಪಾವತಿಗಾಗಿ ತಿಂಗಳಿನ ದಿನಾಂಕ 20 ರಿಂದ 30 ರವರೆಗೆ, ಊಹಾತ್ಮಕ ಹಾಜರಾತಿ (Assumed Attendance) ಪರಿಗಣಿಸುವ ಕಾರಣ, ಸಿಬ್ಬಂದಿ ಸದರಿ ಅವಧಿಯಲ್ಲಿ ಅನಧಿಕೃತ ಗೈರು ಹಾಜರಿ ಹಾಗೂ ರಜೆಯನ್ನು ಪಡೆಯದೇ (ಅತಿ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ) ಕರ್ತವ್ಯಕ್ಕೆ ಹಾಜರಾಗುವುದರಿಂದ ಪೂರ್ಣ ವೇತನ ಪಡೆಯಲು ಅನುಕೂಲವಾಗುವುದರಿಂದ ತಾವುಗಳು ಈ ಕ್ರಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದಾಗ್ಯೂ ಸಹ ನಿಗಮದ ಸಮಸ್ತ ಕಾರ್ಮಿಕ ಸಿಬ್ಬಂದಿ ಹಿತದೃಷ್ಟಿಯಿಂದ ಈ ನೂತನ ಉಪಕ್ರಮ ಜಾರಿಗೊಳಿಸಲಾಗುತ್ತಿದ್ದು, ಪ್ರಾರಂಭಿಕ ತಿಂಗಳುಗಳಲ್ಲಿ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
(ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ರಿಯಾಯಿತಿ: 500 ಹೆಚ್ಚುವರಿ ಬಸ್ ನಿಯೋಜನೆ)