ಬೆಂಗಳೂರು : ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬುಧವಾರದಿಂದಲೇ ಜಾರಿಗೆ ಬರುವಂತೆ ರಾತ್ರಿ ಪಾಳೆ ಸೇವೆಗೆ ಪಡೆಯುತ್ತಿದ್ದ ಒಂದೂವರೆ ಪಟ್ಟು ಹೆಚ್ಚು ಟಿಕೆಟ್ ದರವನ್ನು ರದ್ದುಪಡಿಸಿ ಹಗಲಿನಲ್ಲಿ ಪಡೆಯುವ ದರವನ್ನೇ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ. ಬೆಂಗಳೂರು ನಗರದಲ್ಲಿ ತಡರಾತ್ರಿ ಹಾಗೂ ಬೆಳಿಗ್ಗೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಂಸ್ಥೆಯು ರಾತ್ರಿ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ.
ಸಾಮಾನ್ಯ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಏಕರೂಪದ ಪ್ರಯಾಣ ದರವನ್ನು ವಿಧಿಸುವ ನಿಟ್ಟಿನಲ್ಲಿ ಮುಂದಾಗಿದೆ. ಸಂಸ್ಥೆಯಿಂದ ಕಾರ್ಯಾಚರಣೆ ಮಾಡುವ ರಾತ್ರಿ ಸೇವೆ (Night Service) ಸಾರಿಗೆಗಳಿಗೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ಬುಧವಾರದಿಂದ ಜಾರಿಗೆ ಬರುವಂತೆ ನಿಗದಿಪಡಿಸಲಾಗಿದೆ. ಹಾಗಾಗಿ, ಹಗಲು ಪ್ರಯಾಣದ ದರವೇ ರಾತ್ರಿಯೂ ಪಡೆಯಲಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಸ್ ಪಾಸ್ ಮಾನ್ಯತಾ ಅವಧಿ ವಿಸ್ತರಿಸಿದ ಬಿಎಂಟಿಸಿ : 2022 23ನೇ ಸಾಲಿನ ಅಂತಿಮ ಸೆಮಿಸ್ಟರ್ ಪದವಿ, ವೃತ್ತಿಪರ, ಸ್ನಾತಕೋತ್ತರ, ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತಾ ಅವಧಿಯನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿ ಬಿಎಂಟಿಸಿ ಕಳೆದ ಆಗಸ್ಟ್ 14 ರಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ : ಕಾಲೇಜು ವಿದ್ಯಾರ್ಥಿಗಳಿಗೆ ಸೆ. 30ರ ವರೆಗೆ ಬಸ್ ಪಾಸ್ ಮಾನ್ಯತಾ ಅವಧಿ ವಿಸ್ತರಿಸಿದ ಬಿಎಂಟಿಸಿ
ಸೆಮಿಸ್ಟರ್ ಪದವಿ, ವೃತ್ತಿಪರ, ಸ್ನಾತಕೋತ್ತರ, ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಮತ್ತು ಪರೀಕ್ಷೆಗಳು ಇನ್ನೂ ಮುಕ್ತಾಯವಾಗದ ಹಿನ್ನೆಲೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಮನವಿ ಮಾಡಿಕೊಂಡಿದ್ದವು. ಹೀಗಾಗಿ, 2022 23ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿ, ಸಾಮಾನ್ಯ ಸೇವೆ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿತ್ತು.
ಇದನ್ನೂ ಓದಿ : ವಿದ್ಯಾರ್ಥಿ ಪಾಸ್ ವಿತರಣೆ ವಿಳಂಬ : ಶುಲ್ಕ ಪಾವತಿಸಿದ ರಸೀದಿ ತೋರಿಸಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ..