ಬೆಂಗಳೂರು: ಪಕ್ಕದ ಮನೆಯವರೆಂದು ನಂಬಿಸಿ ವಯೋವೃದ್ಧೆಗೆ ವಂಚನೆ ಮಾಡಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಷಯ್ ಬಂಧಿತ ಆರೋಪಿ. ಈತ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀತಾಪತಿ ಎಂಬ ದಂಪತಿಯ ಮನೆಗೆ ತೆರಳಿ ಮನೆಯ ಬೆಲ್ ಒತ್ತಿದ್ದಾನೆ. ಈ ವೇಳೆ ಸೀತಾಪತಿ ಬಾಗಿಲು ತೆಗೆದಾಗ ನಾನು ನಿಮ್ಮ ಎದುರುಗಡೆ ಮನೆ ನಿವಾಸಿ. ನಮ್ಮ ಮನೆ ಗೃಹ ಪ್ರವೇಶವಿದೆ. ನೀವೂ ಬನ್ನಿ ಎಂದು ದಂಪತಿಗಳ ಕೈಗೆ ಒಂದು ಬೆಳ್ಳಿ ಡಾಲರ್ ಮಾದರಿಯ ಕಾಯಿನ್ ಕೊಟ್ಟಿದ್ದಾನೆ. ಬಳಿಕ ನೀವು ಗೃಹ ಪ್ರವೇಶಕ್ಕೆ ಬಂದಾಗ, ನಿಮ್ಮ ಚಿನ್ನದ ಸರಕ್ಕೆ ಚಿನ್ನದ ಡಾಲರ್ ಕೊಡುತ್ತೇನೆಂದು ಸೀತಾಪತಿ ಪತ್ನಿಯ ಬಳಿ 24 ಗ್ರಾಂ ಚಿನ್ನಾಭರಣ ಪಡೆದಿದ್ದನು.
ಅದೇ ಸಮಯಕ್ಕೆ ಸಿಲಿಂಡರ್ ನೀಡುವ ವ್ಯಕ್ತಿ ಬಂದಾಗ, ಆತನಿಗೆ ಹಣ ಕೊಡಲು ಕೀ ಹುಡುಕಾಡುತ್ತಿದ್ದರು. ಅಷ್ಟರಲ್ಲಿ ಸೀತಾಪತಿ ಪತ್ನಿಯ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಸುಬ್ರಹ್ಮಣ್ಯ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾದ ಡಿಯೋ ಬೈಕ್ ನಂಬರ್ KA_02, HV-4778 ಆಧಾರಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 22 ಗ್ರಾಂ ಚಿನ್ನದ ಸರ, ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ.