ಬೆಂಗಳೂರು: ಜಿಕೆವಿಕೆ ( ಕೃಷಿ ವಿಜ್ಞಾನ ಕೇಂದ್ರದ) ಭದ್ರತಾ ಸಿಬ್ಬಂದಿಯ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣ ಸಂಬಂಧ ಯಲಹಂಕ ಉಪನಗರ ಪೊಲೀಸರು ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ನವೆಂಬರ್ 22ರಂದು ಕೊಲೆಯಾದ ಅಟ್ಟೂರು ಲೇಔಟ್ ನಿವಾಸಿ ದೀಪಕ್ ಕುಮಾರ್ ಸಿಂಗ್(48) ವಿರುದ್ಧ ಅಪ್ರಾಪ್ತ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ದಾಖಲಿಸಿದ್ದಾರೆ. ದೀಪಕ್ ಪುತ್ರಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಇದೀಗ ಅಪ್ರಾಪ್ತೆ ಗರ್ಭಿಣಿಯಾಗಿದ್ದರಿಂದ ಆಕೆಯ ಪ್ರಿಯಕರನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಮದ್ಯದ ಅಮಲಿನಲ್ಲಿ ನಿತ್ಯ ಪುತ್ರಿಗೆ ದೀಪಕ್ ಕುಮಾರ್ ಸಿಂಗ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿತ್ತು. ಅದರಿಂದ ಬೇಸತ್ತಿದ್ದ ಪುತ್ರಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ನವೆಂಬರ್ 22ರಂದು ರಾತ್ರಿ ಮತ್ತೆ ಅದೇ ಕೃತ್ಯ ಎಸಗಲು ಮುಂದಾದಾಗ ಆಕೆ, ತನ್ನ ಪ್ರಿಯಕರನಿಗೆ ಮಾಹಿತಿ ನೀಡಿ ಮನೆಗೆ ಕರೆಸಿಕೊಂಡಿದ್ದಳು. ಆತ ಸ್ನೇಹಿತರ ಜತೆಗೂಡಿ ದೀಪಕ್ ಕುಮಾರ್ ಸಿಂಗ್‌ನನ್ನು ಹತ್ಯೆಗೈದು ಪರಾರಿಯಾಗಿದ್ದ. ನಂತರ ಪೊಲೀಸರು ತನಿಖೆ ನಡೆಸಿ ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದರು.
ವೈದ್ಯಕೀಯ ಪರೀಕ್ಷೆಯಲ್ಲಿ ಬೆಳಕಿಗೆ:
ಬಂಧನದ ಬಳಿಕ ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ. ಇದೀಗ ಆಕೆಯ ಪ್ರಿಯಕರನೇ ಕಾರಣ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಪ್ರಿಯಕರನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್