ಬೆಂಗಳೂರು: ಪ್ರಾಥಮಿಕ ಆರೋಗ್ಯ ಕ್ಷೇತ್ರಗಳನ್ನು ಮೇಲ್ದರ್ಜೆಗೇರಿಸಲು ಸಿಎಸ್ಆರ್ ಫಂಡ್ ಮೊರೆ ಹೋಗಿರುವ ರಾಜ್ಯ ಸರ್ಕಾರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸಮಿತಿ ಮುಖ್ಯಸ್ಥರನ್ನಾಗಿ ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ನೇಮಕ ಮಾಡಿದೆ.
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿನ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಿಎಸ್ಆರ್ ಫಂಡ್ ಹೆಚ್ಚು ಪ್ರಮಾಣದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ದೇಶದಲ್ಲಿ ಒಟ್ಟು ಸಂಗ್ರಹವಾಗುವ ಸಿಎಸ್ಆರ್ ನಿಧಿಯಲ್ಲಿ ನಾಲ್ಕನೇ ಒಂದು ಭಾಗ ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿದ್ದು, ಅದರಂತೆ ಕರ್ನಾಟಕ ಕೂಡ ಸಿಎಸ್ಆರ್ ನಿಧಿಯಲ್ಲಿ ಶೇ.25 ರಷ್ಟನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಲಿದೆ ಎಂದರು.
ವಿಪ್ರೋ, ಬಾಷ್, ಟೊಯೋಟಾ ಸಂಸ್ಥೆಗಳು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿವೆ. ಈ ಸಾಲಿಗೆ ಈಗ ಕಿರ್ಲೋಸ್ಕರ್ ಸಂಸ್ಥೆ ಸೇರಿದೆ. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸಮಿತಿ ಮುಖ್ಯಸ್ಥರನ್ನಾಗಿ ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗಿದೆ ಎಂದರು.
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಇಂದಿನ ಆರ್ಥಿಕ ಸ್ಥಿತಿಗತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಎಸ್ ಆರ್ ಫಂಡ್ ಬಳಕೆ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ 2500 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ, ಇವುಗಳನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ಬೇಕಾಗಲಿದ್ದು, ಅಲ್ಲದೇ, ಬಹಳಷ್ಟು ವರ್ಷಗಳು ಆಗಲಿದೆ. ಅದಕ್ಕಾಗಿ ಖಾಸಗಿ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಎಂದು ಸಿಎಸ್ಆರ್ ಸಮಿತಿಗೆ ಗೀತಾಂಜಲಿ ಕಿರ್ಲೋಸ್ಕರ್ ನೇಮಕ ಮಾಡಿದ್ದನ್ನು ಸಮರ್ಥಿಸಿಕೊಂಡರು.
ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗೆ ಆದ್ಯತೆ ನೀಡಿದ್ದು, ಕೋವಿಡ್ ಹಿನ್ನೆಲೆ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ವಲಯದಲ್ಲಿ ಖಾಸಗಿ ವಲಯದ ಬಂಡವಾಳ ಹೂಡಿಕೆಯೂ ಹೆಚ್ಚಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯ ಹೆಚ್ಚಳ, ಸಮುದಾಯದ ಆರೋಗ್ಯ ವೃದ್ಧಿ ಕಾರ್ಯಕ್ರಮಗಳಿಗೆ ಸಿಎಸ್ಆರ್ ಸಹಭಾಗಿತ್ವ ವಹಿಸಲು ಕಿರ್ಲೋಸ್ಕರ್ ಸಂಸ್ಥೆಯ ಮುಖ್ಯಸ್ಥೆ ಗೀತಾಂಜಲಿ ಕಿರ್ಲೋಸ್ಕರ್ ಅವರು ಮುಂದೆ ಬಂದಿದ್ದಾರೆ. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ ನಮ್ಮ ಜೊತೆ ಕೈಜೋಡಿಸಲು ಕಿರ್ಲೋಸ್ಕರ್ ಸಂಸ್ಥೆ ಮುಂದೆ ಬಂದಿದೆ ಎಂದರು.
ಓದಿ: 'ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ': ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಯತ್ನಾಳ್!
ಸಿಎಸ್ಆರ್ ಸಮಿತಿ ಮುಖ್ಯಸ್ಥ ಸ್ಥಾನದ ಜವಾಬ್ದಾರಿ ನೀಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್ ಗೆ ಗೀತಾಂಜಲಿ ಕಿರ್ಲೋಸ್ಕರ್ ಧನ್ಯವಾದ ಸಲ್ಲಿಸಿದರು. ಸರ್ಕಾರದ ಜೊತೆ ಸಹಭಾಗಿತ್ವ ವಹಿಸಲು ಕೆಲಸ ಮಾಡಲು ಹೆಮ್ಮೆಯಾಗುತ್ತಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಆರೋಗ್ಯ ಕ್ಷೇತ್ರದ ಸುಧಾರಣೆ ಮಾಡುವ ಸರ್ಕಾರದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.