ಬೆಂಗಳೂರು: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಕುಟುಂಬದ ವಿರುದ್ಧ ಕೇಸ್ ಹಿನ್ನೆಲೆ ಶಾಸಕರಿಗೆ ಗಾಣಿಗ ಸಮುದಾಯದ ಬೆಂಬಲ ಲಭಿಸಿದೆ. ಸುಮಾರು 85 ಲಕ್ಷದಷ್ಟು ಜನಸಂಖ್ಯೆ ಒಳಗೊಂಡ ಗಾಣಿಗ ಸಮುದಾಯದ ಪ್ರತಿನಿಧಿಯಾಗಿರುವ ಸಂಗಮೇಶ್ರ ಪರ ಇಂದು ಗಾಣಿಗ ಸಮುದಾಯದ ಪೀಠಾಧಿಪತಿ ಮಲ್ಲಿನಾಥ ಶ್ರೀಗಳು ನಿಂತಿದ್ದಾರೆ.
ಇವರ ಪರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಶ್ರೀಗಳು, ಸಂಗಮೇಶ್ ಮೂರು ಭಾರಿ ಶಾಸಕರಾಗಿದ್ದಾರೆ. ನಮ್ಮ ಸಮುದಾಯದಿಂದ ಗೆದ್ದು ಶಾಸಕರಾಗಿದ್ದಾರೆ. ಕಬ್ಬಡಿ ಪಂದ್ಯದ ವೇಳೆ ಘರ್ಷಣೆ ನಡೆದಿದೆ. ಭದ್ರಾವತಿಯಲ್ಲಿ ಬಿಜೆಪಿಗೆ ಕ್ಯಾಂಡಿಡೇಟ್ ಇಲ್ಲ. ಹೀಗಾಗಿ ಅಲ್ಲಿ ಷಡ್ಯಂತ್ರ ಮಾಡಲಾಗಿದೆ. ನಮ್ಮ ಸಮುದಾಯದಲ್ಲಿ 85 ಲಕ್ಷ ಜನಸಂಖ್ಯೆಯಿದೆ. ಶಾಸಕರ ಪುತ್ರನನ್ನು ಬಂಧಿಸಲಾಗಿದೆ. ಕೂಡಲೇ ಅವರ ಪುತ್ರನನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಗಮೇಶ್ ಕುಟುಂಬದ ಕೇಸ್ ವಾಪಸ್ ಪಡೆಯಬೇಕು. ಅವರ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ನಾವು ಸಿಎಂಗೆ ಮನವಿ ಕೊಡಲು ಮುಂದಾಗಿದ್ದೆವು. ಆದರೆ ನಮಗೆ ಭೇಟಿಗೆ ಅವಕಾಶಕೊಡಲಿಲ್ಲ. ಕೂಡಲೇ ಅವರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡ್ತವೆ. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ಗಾಣಿಗ ಸಮುದಾಯದ ಶ್ರೀಗಳ ಎಚ್ಚರಿಕೆ ನೀಡಿದರು.
ಷಡ್ಯಂತ್ರ ಮಾಡಿ ಬಿಜೆಪಿ ಬೀಜ ಬಿತ್ತೋಕೆ ಹೊರಟಿದೆ: ಬಿ.ಕೆ. ಸಂಗಮೇಶ್
ಭದ್ರಾವತಿಯಲ್ಲಿ ಚುನಾವಣೆ ಗೆದ್ದ ಇತಿಹಾಸ ಬಿಜೆಪಿಗಿಲ್ಲ. ಇಂತ ಷಡ್ಯಂತ್ರ ಮಾಡಿ ಬಿಜೆಪಿ ಬೀಜ ಬಿತ್ತೋಕೆ ಹೊರಟಿದ್ದಾರೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ, ನಾನು ಹಳೆಯ ಘಟನೆಗಳನ್ನ ಹೇಳಲ್ಲ. ನನ್ನ ಮೇಲೆ ಕೇಸ್ ಹಾಕಿದ್ದಾರೆ. ವಿಧಾನಸಭೆಯಲ್ಲಿ ಅಮಾನತು ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರಿದ್ದಾರೆ. ನಮ್ಮ ಎಲ್ಲರಲ್ಲೂ ಸೌಹಾರ್ದತೆಯಿದೆ. ಅಧಿಕಾರ ಮುಖ್ಯವಲ್ಲ. ಸಿಎಂ, ರಾಘವೇಂದ್ರ, ಈಶ್ವರಪ್ಪ ಸಣ್ಣತನ ಮಾಡ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಜನ ಅಸಹ್ಯ ಪಡ್ತಿದ್ದಾರೆ. ನಮ್ಮ ಮೇಲೆ, ಕುಟುಂಬದ ಮೇಲೆ ಕೇಸ್ ಹಾಕಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ನಮಗೆ ನ್ಯಾಯ ಕೊಡಿಸಬೇಕು. ಯಡಿಯೂರಪ್ಪ ಹೇಳಿದ್ರು ಅಂತ ಹೊರಹಾಕಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಮುಖ್ಯಮಂತ್ರಿಯಾಗ್ತಾರೆ. ಮುಂಗಳವಾರ ನಾವು ಎಸ್ಪಿ ಕಚೇರಿ ಮುಂದೆ ಪ್ರತಿಭಟಿಸುತ್ತೇವೆ. ಎಸ್ಪಿ ಕಚೇರಿಗೆ ಮುತ್ತಿಗೆ ಹಾಕ್ತವೆ. ಮುಂದಿನವಾರ ನಮ್ಮ ನಾಯಕರು ಧರಣಿ ಮಾಡ್ತಾರೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರು ಧರಣಿ ಮಾಡ್ತಾರೆ. ಬಿಎಸ್ ವೈ.ರಾಘವೇಂದ್ರ, ಈಶ್ವರಪ್ಪ ಹಗರಣ ನನಗೆ ಗೊತ್ತಿದೆ. ಮುಂದೆ ಎಲ್ಲಾ ಹಗರಣ ಬಯಲು ಮಾಡೇನೆ ಎಂದು ಸಿಎಂ, ಈಶ್ವರಪ್ಪಗೆ ಸಂಗಮೇಶ್ ಎಚ್ಚರಿಕೆ ನೀಡಿದರು.
ಒಂದು ತಿಂಗಳಲ್ಲೇ ಅವರ ಹಗರಣ ಬಯಲು ಮಾಡೇನೆ. ಅಕ್ರಮ ಆಸ್ತಿ ಬಗ್ಗೆ ದಾಖಲೆ ಬಿಡುಗಡೆ ಮಾಡೇನೆ. ನಾನು ಬ್ಲಾಕ್ ಮೇಲ್ ಮಾಡುವ ರಾಜಕಾರಣಿಯಲ್ಲ. ಹಿಂದೆ ಎಷ್ಟು ಆಸ್ತಿಯಿತ್ತು, ಈಗ ಎಷ್ಟು ಆಸ್ತಿಯಿದೆ. ಇದೆಲ್ಲವನ್ನೂ ನಾನು ಬಯಲು ಮಾಡೇನೆ. ಮೂರು ತಿಂಗಳಷ್ಟೇ ಈ ಸರ್ಕಾರ ಇರೋದು. ನಮ್ಮ ಶಾಸಕರಿಗೆ ಬೆಲೆಯಿಲ್ಲದಂತಾಗಿದೆ. ಹೆಣ್ಣುಮಕ್ಕಳು ಅನುಮಾನದಿಂದ ನೋಡುವಂತಾಗಿದೆ. ವಿಧಾನಸೌಧದ ಪಾವಿತ್ರ್ಯ ಹಾಳಾಗಿದೆ. ಆರು ಜನ ಈಗ ಕೋರ್ಟ್ಗೆ ಹೋಗಿದ್ದಾರೆ. ನಿಮ್ಮಲ್ಲಿ ಸತ್ಯ ಇದ್ದರೆ ಯಾಕೆ ಹೆದರಬೇಕು? ಮಾಧ್ಯಮಗಳು ಸರಿ, ತಪ್ಪು ತೋರಿಸೋಕೆ ಸ್ವಾತಂತ್ರ್ಯವಿಲ್ಲ. ಜನ ಸೇವೆ ಮಾಡಲಿ ಎಂದು ಗೆಲ್ಲಿಸಿ ಕಳಿಸ್ತಾರೆ. ನಾವು ಇಲ್ಲಿ ಬಂದು ಮಜಾ ಮಾಡೋಕಾ ಕಳಿಸೋದು. ದುಡ್ಡು ಮಾಡೋಕೆ ಇಲ್ಲಿ ಬರೋದು ಎಂದರು.
ಮೂರು ತಿಂಗಳಲ್ಲಿ ಎಕ್ಕುಟ್ಟಿ ಹೋಗಲಿದೆ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಇನ್ನು ಮೂರು ತಿಂಗಳಲ್ಲಿ ಎಕ್ಕುಟ್ಟಿ ಹೋಗಲಿದೆ. ಅಧಿಕಾರ ಇದೆ ಎಂದು ಅಧಿಕಾರದ ವ್ಯಾಮೋಹದಿಂದ ತಪ್ಪುಗಳನ್ನು ಎಸಗಿದ್ದಾರೆ. ಭವಿಷ್ಯ ರಾಜ್ಯ ಸರ್ಕಾರಕ್ಕೆ ಆಯಸ್ಸು ಇರುವುದು ಎರಡು ಮೂರು ತಿಂಗಳು ಮಾತ್ರ. ಅಧಿಕಾರ ಇದ್ದಾಗ ಉತ್ತಮ ಆಡಳಿತ ನೀಡುವ ಕಾರ್ಯ ಮಾಡಬೇಕು, ಆದರೆ, ಯಡಿಯೂರಪ್ಪ ರಾಘವೇಂದ್ರ ಹಾಗೂ ಈಶ್ವರಪ್ಪ ಲುಚ್ಚಾ ರಾಜಕಾರಣ ಮಾಡುತ್ತಿದ್ದಾರೆ. ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಜನ ಇವರನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ದೌರ್ಜನ್ಯದ ವಿರುದ್ಧ ದನಿ ಕೇಳಿ ಬರುತ್ತಿದೆ ಎಂದರು.