ಬೆಂಗಳೂರು : ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿ.ವಿ. ವಿಚಾರಣೆಯ ಕುರಿತು ಭಾರತೀಯ ಜನತಾ ಪಾರ್ಟಿಯ ಮುಖಂಡರ ಮೇಲೆ ಗೂಬೆ ಕೂರಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಸಲ್ಪಡುತ್ತಿರುವುದು ಅತ್ಯಂತ ಖಂಡನೀಯ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ದೆಹಲಿಯ ಉಚ್ಛ ನ್ಯಾಯಾಲಯದ ಆದೇಶದಂತೆ ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಕೋವಿಡ್ ಔಷಧಿ ಮತ್ತು ಇತರೆ ಸೌಲಭ್ಯಗಳ ಅಕ್ರಮ ವಿತರಣೆಗೆ ಸಂಬಂಧಿಸಿ ವಿಚಾರಣೆ ನಡೆಸುವಂತೆ ಸೂಕ್ತ ಕ್ರಮಕೈಗೊಳ್ಳಲು ನಿರ್ದೇಶಿಸಿದ ಹಿನ್ನೆಲೆ, ತನಿಖೆ ನಡೆಸಲಾಗುತ್ತಿದೆ. ಭಾಜಪಾದ ದೆಹಲಿ ಸಂಸದ ಗೌತಂ ಗಂಭೀರ್ ಸೇರಿದಂತೆ ಇನ್ನೂ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಆದರೆ, ಮಾಧ್ಯಮಗಳು ನಿಜಾಂಶವನ್ನು ಬಚ್ಚಿಟ್ಟು ಕೇವಲ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಮೇಲೆ ರಾಜಕೀಯ ದುರುದ್ದೇಶದಿಂದ ವಿಚಾರಣೆ ನಡೆಸಲಾಗುತ್ತಿದೆ ಎನ್ನುವ ಸುದ್ದಿಯನ್ನು ಮಾತ್ರ ತಿಳಿಸುತ್ತಿರುವುದು ವಿಷಾದನೀಯ ಮತ್ತು ಖಂಡನೀಯ ಎಂದಿದ್ದಾರೆ.
ಇದನ್ನೂ ಓದಿ: ಸೋಂಕಿನಿಂದ ಮೃತಪಟ್ಟವರ ಬೇಕಾಬಿಟ್ಟಿ ಅಂತ್ಯಸಂಸ್ಕಾರ: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಆತಂಕ
ಕೋವಿಡ್ ಔಷಧಿ ಮತ್ತಿತರೆ ಸೌಲಭ್ಯಗಳ ಅಕ್ರಮ ವಿತರಣೆಗೆ ಸಂಬಂಧಿಸಿ ಈ ವಿಚಾರಣೆ ನಡೆಸುತ್ತಿರುವುದಾಗಿ ದೆಹಲಿ ಪೊಲೀಸ್ ಅಪರಾಧ ಪತ್ತೆ ವಿಭಾಗವು ಈಗಾಗಲೇ ಸ್ಪಷ್ಟಪಡಿಸಿದೆ.
ಡಾ. ದೀಪಕ್ ಸಿಂಗ್ ಅವರು ಸಲ್ಲಿಸಿದ ರಿಟ್ ಪಿಟಿಷನ್ ಆಧಾರದಲ್ಲಿ ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಹಲವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿರುವುದಾಗಿ ಕ್ಯಾ. ಗಣೇಶ್ ಕಾರ್ಣಿಕ್ ಪತ್ರಿಕಾ ಪ್ರಕಟಣೆ ಮೂಲಕ ವಿವರಿಸಿದ್ದಾರೆ.