ಬೆಂಗಳೂರು: ನಗರದ ಆರ್ವಿ ರಸ್ತೆಯ, ಮಾವಳ್ಳಿ ಅತಿದೊಡ್ಡ ಗಣೇಶ ಮೂರ್ತಿಗಳ ಮಾರಾಟ ಸ್ಥಳ.. ಸರ್ಕಾರ ಪ್ರತಿವರ್ಷ ಪರಿಸರ ಸ್ನೇಹಿ ಗಣಪ ಬಳಕೆಮಾಡುವಂತೆ ಹೇಳಿದ್ದರೂ, ಕಾರ್ಯರೂಪಕ್ಕೆ ತರಲಾಗಿಲ್ಲ. ಮಾವಳ್ಳಿ ತುಂಬಾ ಬಣ್ಣಬಣ್ಣದ ಪಿಒಪಿಯಿಂದ ತಯಾರಿಸಿದ ಮೂರ್ತಿಗಳೇ ರಾರಾಜಿಸುತ್ತಿದ್ದವು.
ಗಣಪ ಬಾಡಿಗೆಗೆ :
ಸಾರ್ವಜನಿಕ ಜಾಗಗಳಲ್ಲಿ ಬೃಹತ್ ಗಣಪನನ್ನ ಪ್ರತಿಷ್ಠಾಪಿಸಲು ಸಂಘಟನೆಗಳಿಗೆ ಮನಸ್ಸಿದ್ದರೆ ಲಾಲ್ ಭಾಗ್ ರಸ್ತೆಯ ಮಾವಳ್ಳಿಯಲ್ಲಿ ಗಣೇಶ ಮೂರ್ತಿ ಬಾಡಿಗೆಗೆ ಸಿಗಲಿದೆ. ಇಲ್ಲಿನ ಪ್ರಮುಖ ವ್ಯಾಪಾರಿಯಾದ ಶ್ರೀನಿವಾಸ್ ಅವರು ಮಾತನಾಡಿ, ಬಾಡಿಗೆಗೂ ಗಣಪತಿ ನೀಡುತ್ತೇವೆ. ಹತ್ತು ಸಾವಿರ ರೂಪಾಯಿ ಬಾಡಿಗೆ ತೆಗೆದುಕೊಳ್ಳಲಾಗುವುದು. ಹತ್ತು ಸಾವಿರ ಮುಂಗಡ ಪಡೆದು ಗಣಪತಿ ವಾಪಾಸ್ ತಂದ ಮೇಲೆ ಹಣ ಹಿಂದಿರುಗಿಸಲಾಗುವುದು ಎಂದರು. ಅದರ ಜೊತೆಗೆಯೇ ಪೂಜಾ ಗಣಪತಿ ಕೊಡಲಾಗುವುದು, ಅದನ್ನಷ್ಟೇ ವಿಸರ್ಜಿಸಿದರಾಯ್ತು ಎಂದಿದ್ದಾರೆ.
ಜನರನ್ನು ಸೆಳೆಯುವ ವಿಭಿನ್ನ ಮೂರ್ತಿಗಳಿಲ್ಲ:
ಇನ್ನೊಂದೆಡೆ ಕೋವಿಡ್ ಕರಿಛಾಯೆ ಹಬ್ಬಗಳ ಮೇಲೆ ಹಬ್ಬಿರುವುದರಿಂದ ವ್ಯಾಪಾರಸ್ಥರೂ ನಷ್ಟದಲ್ಲೇ ಇದ್ದಾರೆ. ಹೀಗಾಗಿ ಜನರನ್ನು ಸೆಳೆಯುವಂತಹ, ಮುದಗೊಳಿಸುವಂತಹ ಯಾವುದೇ ವಿಭಿನ್ನ ಗಣಪನ ಮೂರ್ತಿ ತಯಾರಿ ಈ ಬಾರಿ ಮಾಡಿಲ್ಲ. ಕಳೆದ ಬಾರಿ ಕೋವಿಡ್ ಗುಣಪಡಿಸುವ ವೈದ್ಯರ ರೂಪದ ಗಣಪ, ಅದಕ್ಕೂ ಹಿಂದಿನ ವರ್ಷ ಇಸ್ರೋ ಸಾಧನೆ ಬಿಂಬಿಸುವ ಗಣಪ ಹೀಗೆ ನಾನಾ ರೀತಿಯ ಅವತಾರದಲ್ಲಿ ಮೂರಗಯಿ ಸಿದ್ಧವಾಗುತ್ತಿದ್ದವು. ಒಂದು ಬಾರಿ ಪಾಕಿಸ್ತಾನದ ಹುಡುಗಿಯ ಹೃದಯ ಶಸ್ತ್ರಚಿಕಿತ್ಸೆಯನ್ನು ಬೇರೆಲ್ಲಾ ದೇಶಗಳು ಕೈಚೆಲ್ಲಿದಾಗ ಬೆಂಗಳೂರಲ್ಲಿ ಯಶಸ್ವಿಯಾಗಿ ಮಾಡಿದ ವಿಷಯವನ್ನೂ ಗಣಪತಿ ಹಬ್ಬದಲ್ಲಿ ಮೂರ್ತಿ ಮಾಡಿ ತೋರಿಸಲಾಗಿತ್ತು ಎಂದು 75 ವರ್ಷಗಳಿಂದ ಗಣೇಶ ಮೂರ್ತಿ ವ್ಯಾಪಾರ ಮಾಡಿಕೊಂಡು ಬಂದಿರುವ ಶ್ರೀನಿವಾಸ್ ತಿಳಿಸಿದರು.
ವ್ಯಾಪಾರ ನಡೆದಿಲ್ಲ:
ಕೇವಲ ಮೂರು ದಿನದ ಹಿಂದೆ ಅನುಮತಿ ಕೊಟ್ಟಿರುವುದರಿಂದ ವ್ಯಾಪಾರ ಚೆನ್ನಾಗಿ ನಡೆದಿಲ್ಲ. ಕನಿಷ್ಟ ಒಂದು ತಿಂಗಳಿಂದ ಮಾರಾಟ ಮಾಡಲು ಅವಕಾಶ ನೀಡಬೇಕಿತ್ತು ಎಂದು ಶ್ರೀನಿವಾಸ್ ಬೇಸರ ಹೊರಹಾಕಿದರು.
ಜೊತೆಗೆ ಪಿಒಪಿ ಗಣೇಶ ವಿಸರ್ಜನೆಗೆ ಪಾಲಿಕೆ ಅವಕಾಶ ಕೊಡದಿದ್ದರೆ ನಮ್ಮಲ್ಲಿಗೇ ತಂದು ವಿಸರ್ಜನೆ ಮಾಡಿ ಎಂದು ವ್ಯಾಪಾರಸ್ಥರು ಅನುಕೂಲ ಮಾಡಿ ಕೊಟ್ಟಿದ್ದಾರೆ. ಜೊತೆಗೆ ಗಣಪತಿ ವಿಸರ್ಜನೆಗೆ ದೊಡ್ಡ ದೊಡ್ಡ ಅಲ್ಯೂಮೀನಿಯಂ ಪಾತ್ರೆಗಳನ್ನು ಸಿದ್ಧಪಡಿಸಲಾಗಿದೆ. ಅದರಲ್ಲೇ ಸಾರ್ವಜನಿಕರು ಪಿಒಪಿ ಅಥವಾ ಮಣ್ಣಿನ ಗಣಪನನ್ನು ವಿಸರ್ಜಿಸಬಹುದು. ನಂತರ ಅದರಿಂದಲೇ ಮುಂದಿನವರ್ಷ ಮತ್ತೆ ಮೂರ್ತಿ ತಯಾರಿಸಲು ಮರುಬಳಕೆ ಮಾಡಬಹುದು ಹೇಳಿದ್ದಾರೆ.