ಬೆಂಗಳೂರು : ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ನಿವಾಸಗಳು ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿವೆ. ಜನರು, ಸಚಿವರು, ವಿಧಾನ ಪರಿಷತ್ ನಾಮನಿರ್ದೇಶನ ಆಕಾಂಕ್ಷಿಗಳು ಹಾಗೂ ಇತರೆ ನಾಯಕರು ಭೇಟಿ ನೀಡುತ್ತಿದ್ದಾರೆ. ಇನ್ನೊಂದೆಡೆ ಧಾರ್ಮಿಕ ಮುಖಂಡರು, ಸ್ವಾಮೀಜಿಗಳೂ ಸಹ ಕೆಲವೆಡೆ ಭೇಟಿ ನೀಡುತ್ತಿರುವುದು ಗಮನ ಸೆಳೆಯಿತು. ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಇಂದು ಪೇಜಾವರ ಶ್ರೀಗಳು ಭೇಟಿ ನೀಡಿದರು. ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ಶ್ರೀಗಳಿಂದ ಪರಮೇಶ್ವರ್ ಆಶೀರ್ವಾದ ಪಡೆದುಕೊಂಡರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಸರ್ಕಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ. ತಕ್ಷಣ ಯಾವುದೇ ಸಂಸ್ಥೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಸಂವಿಧಾನ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ಅಂತಹ ಕ್ರಮ ಆಗುತ್ತದೆ. ಕಾನೂನು ಉಲ್ಲಂಘನೆ ಮಾಡದೇ ಇದ್ದರೆ ಅಂತಹ ಪ್ರಶ್ನೆಯೇ ಬರುವುದಿಲ್ಲ ಎಂದರು.
ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳ ಟೀಕೆಗಳ ವಿಚಾರಕ್ಕೆ, ಇವರಿಗೆ ಒಂದು ಸರ್ಕಾರ ಹೇಗೆ ನಡೆಯುತ್ತದೆ ಎಂಬುದೂ ಕೂಡ ಗೊತ್ತಿಲ್ವಾ? ಜನರೇ ಇವರನ್ನು ಮನೆಯಲ್ಲಿ ಕೂರಿಸಿದರೂ ಬುದ್ದಿ ಬರ್ತಿಲ್ವಾ? ಅನಗತ್ಯ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊಡ್ತೇವೆ ಅಂತ ಹೇಳಿದ್ದೇವೆ. 10 ಕೆಜಿ ಹೊಂದಿಸಿಕೊಳ್ಳುವುದಕ್ಕಾದರೂ ಸಮಯ ಬೇಕಲ್ಲ. ಮಾನದಂಡಗಳು ಪ್ರತಿಪಕ್ಷಗಳು ಹೇಳಿದ ತರಹ ಏನೂ ಇರಲ್ಲ. ನಾವು ಇನ್ನೂ ಗ್ಯಾರಂಟಿಗಳ ಬಗ್ಗೆ, ನಿಯಮಗಳ ಬಗ್ಗೆ ಹೇಳಿಯೇ ಇಲ್ಲ. ಆಗಲೇ ರಾಜಕೀಯ ಏಕೆ? ಎಂದು ಹೇಳಿದರು.
ಪರಿಷತ್ ಸ್ಥಾನಕ್ಕೆ ಲಾಬಿ: ಖಾಲಿಯಾದ ಎರಡು ನಾಮನಿರ್ದೇಶಿತ ಪರಿಷತ್ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ಲಾಬಿ ಶುರುವಾಗಿದೆ. ಪರಿಷತ್ ಸ್ಥಾನಕ್ಕಾಗಿ ಸಿನಿಮಾ ನಟ, ನಿರ್ದೇಶಕ ಮದನ್ ಪಟೇಲ್ ಕಸರತ್ತು ನಡೆಸಿದ್ದಾರೆ. ಎಐಸಿಸಿ ನಾಯಕರನ್ನು ಭೇಟಿ ಮಾಡಿ ಬಂದಿರುವ ಅವರು ರಾಜ್ಯ ನಾಯಕರನ್ನೂ ಭೇಟಿಯಾಗಿ ಚರ್ಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಸಮಾಲೋಚಿಸುತ್ತಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿದ್ದ ಪಿ.ಆರ್.ರಮೇಶ್ ಹಾಗೂ ಮೋಹನ್ ಕೊಂಡಜ್ಜಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೊಂಡಜ್ಜಿ ಅವರ ಸ್ಥಾನಕ್ಕೆ ಸಿನಿಮಾ ಕ್ಷೇತ್ರದಿಂದ ತಮ್ಮನ್ನು ನಾಮನಿರ್ದೇಶನಕ್ಕೆ ಪರಿಗಣಿಸುವಂತೆ ಮದನ್ ಪಟೇಲ್ ಒತ್ತಡ ಹೇರುತ್ತಿದ್ದಾರೆ.
ಇನ್ನೊಂದೆಡೆ, ಕಲಾವಿದರ ಕೋಟಾದಡಿ ಇಲ್ಲವೇ ಖಾಲಿಯಾಗಿರುವ ಪಿ.ಆರ್.ರಮೇಶ್ ಅವರ ಸ್ಥಾನದಲ್ಲಿ ತಮ್ಮನ್ನೂ ನಾಮ ನಿರ್ದೇಶನಕ್ಕೆ ಪರಿಗಣಿಸುವಂತೆ ನಟಿ ಹಾಗೂ ಮಾಜಿ ಎಂಎಲ್ಸಿ ಡಾ.ಜಯಮಾಲಾ ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಬಳಿಕ ಮಾಜಿ ಸಚಿವೆ ಜಯಮಾಲಾ ಪರಿಷತ್ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಸಹ ಪೂರಕವಾಗಿ ಸ್ಪಂದಿಸಿದ್ದಾರೆ ಎಂಬ ಮಾಹಿತಿ ಇದೆ.
ಭೇಟಿ ಬಳಿಕ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಶುಭಾಶಯ ತಿಳಿಸಲು ಬಂದಿದ್ದೆ. ನಾನು ಯಾವ ಪರಿಷತ್, ನಿಗಮ ಮಂಡಳಿ ಸ್ಥಾನದ ಆಕಾಂಕ್ಷಿ ಅಲ್ಲ ಎಂದರು. ಸಿದ್ದರಾಮಯ್ಯ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಒಬ್ಬರಿಗೆ ಸಿಕ್ಕಿದ್ದೇ ಹೆಚ್ಚು. ಅಷ್ಟು ಜನ ಗೆದ್ದಿದ್ದಾರೆ. ಸಮರ್ಥರಿಗೆ ಸಚಿವೆ ಸ್ಥಾನ ಸಿಕ್ಕಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಿದರು.
ತಿಮ್ಮಾಪೂರ್ ಭೇಟಿ: ಇನ್ನೊಂದೆಡೆ, ಸಚಿವ ಆರ್.ಬಿ.ತಿಮ್ಮಾಪುರ್ ಅವರು ಡಿಸಿಎಂ ಡಿಕೆಶಿ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಧನ್ಯವಾದ ಹೇಳಿದ್ದಾರೆ. ನಿನ್ನೆಯಷ್ಟೇ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರು ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಅವಕಾಶ ನೀಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವೈರಲ್ ಆಗಿರುವ ಖಾತೆ ಹಂಚಿಕೆ ಪಟ್ಟಿ ನಕಲಿ ಎಂದ ಕಾಂಗ್ರೆಸ್.. ಪ್ರವೀಣ್ ನೆಟ್ಟಾರು ಪತ್ನಿ ನೌಕರಿ ಬಗ್ಗೆ ಸಿಎಂ ಸ್ಪಷ್ಟನೆ!