ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಸುಚನಾ ಸೇಠ್ ಕೆಲಸ ಮಾಡುತ್ತಿರುವ ರೆಸಿಡೆನ್ಸಿ ರಸ್ತೆಯಲ್ಲಿರುವ ಕಂಪನಿಗೆ ಗೋವಾ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಆರೋಪಿ ಮತ್ತು ಅವರ ಪತಿ ವೆಂಕಟರಮಣ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಚನಾ ಸೇಠ್ ರಾಚೇನಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ 6 ವರ್ಷದಿಂದ ವಾಸವಿದ್ದರು ಎಂಬ ವಿಚಾರ ಈಗ ಗೊತ್ತಾಗಿದೆ.
ಮತ್ತೊಂದು ಕಡೆ, ಗೋವಾದಲ್ಲಿ ಕೊಲೆಯಾದ ನಾಲ್ಕು ವರ್ಷದ ಮಗುವಿನ ಅಂತ್ಯಕ್ರಿಯೆಯು ನಗರದ ಹರಿಶ್ಚಂದ್ರ ಘಾಟ್ನಲ್ಲಿ ಇಂದು ಮುಂಜಾನೆ ನಡೆಯಿತು. ತಂದೆ ವೆಂಕಟರಮಣ ಅವರು ಮಗುವಿನ ಅಂತ್ಯಕ್ರಿಯೆ ನೆರವೇರಿಸಿ ಕಣ್ಣೀರಿಟ್ಟರು. ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮಗುವಿನ ಮೃತದೇಹವನ್ನು ನಿನ್ನೆ ಮಧ್ಯರಾತ್ರಿ 1:45 ಕ್ಕೆ ಐಮಂಗಲ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ರವಾನಿಸಲಾಯಿತು. ಯಶವಂತಪುರ ಬಳಿ ಇರುವ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿರುವ ತಂದೆ ನಿವಾಸದ ಬಳಿ ಸಾರ್ವಜನಿಕ ದರ್ಶನದ ಬಳಿಕ ಬೆಳಗ್ಗೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ ನೇರವೇರಿಸಲಾಯಿತು.
ಪ್ರಕರಣದ ಹಿನ್ನೆಲೆ: ಎಐ ಆಧರಿತ ಕಂಪನಿಯೊಂದರ ಸಿಇಒ ಆಗಿರುವ ಆರೋಪಿ ಸುಚನಾ ಸೇಠ್ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಅವರೊಂದಿಗೆ 2008ರಲ್ಲಿ ವಿವಾಹವಾಗಿದ್ದರು.
ಕಳೆದೆರಡು ವರ್ಷಗಳಿಂದ ಇಬ್ಬರು ದೂರವಾಗಿದ್ದರು. ವಿಚ್ಛೇದನ ಕೋರಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿ ಭಾನುವಾರ ಒಂದು ದಿನ ಪೂರ್ತಿ ವೆಂಕಟರಮಣ ಅವರು ಮಗುವನ್ನು ಭೇಟಿ ಮಾಡಲು ಕೋರ್ಟ್ ಅನುಮತಿ ನೀಡಿತ್ತು. ಈ ಮಧ್ಯೆ ಸುಚನಾ, ಇದೇ 6 ರಂದು ಗೋವಾ ಪ್ರವಾಸ ಕೈಗೊಂಡಿದ್ದರು. ಉತ್ತರ ಗೋವಾದ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ವಾಸ್ತವ್ಯ ಹೂಡಿದ್ದ ಅವರು, ಮಗುವಿನ ಶವವನ್ನು ಕಾರಿನ ಲಗೇಜ್ನಲ್ಲಿಟ್ಟುಕೊಂಡು ಬೆಂಗಳೂರಿಗೆ ವಾಪಸ್ ತರುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯೆ ಚಿತ್ರದುರ್ಗದ ಐಮಂಗಲದಲ್ಲಿ ಅವರನ್ನು ಬಂಧಿಸಲಾಗಿತ್ತು.
ಗೋವಾ ಹೋಟೆಲ್ ಸಿಬ್ಬಂದಿ ಇವರ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಮಗುವಿನ ಜೊತೆ ಬಂದಿದ್ದ ಸುಚನಾ, ಹೊರಡುವಾಗ ಒಬ್ಬರೇ ತೆರಳಿರುವುದು ಸ್ಪಷ್ಟವಾಗಿತ್ತು. ಇದರಿಂದ ಇವರ ಬೆನ್ನು ಬಿದ್ದ ಪೊಲೀಸರು, ಕಾರಿನ ಡಿಕ್ಕಿಯಲ್ಲಿನ ಸೂಟ್ಕೇಸ್ನಲ್ಲಿ ಮಗುವಿನ ಶವ ಪತ್ತೆ ಮಾಡಿದ್ದರು.
ಇದನ್ನೂ ಓದಿ: 36 ಗಂಟೆಗೂ ಮೊದಲು ಉಸಿರುಗಟ್ಟಿಸಿ ಮಗುವಿನ ಕೊಲೆ: ಶವಪರೀಕ್ಷೆ ವರದಿಯಲ್ಲಿ ಬಹಿರಂಗ