ಬೆಂಗಳೂರು: ಕೋವಿಡ್ ಸೋಂಕು ದೃಢಪಟ್ಟ 40 ವರ್ಷದ ಐಟಿ ಉದ್ಯೋಗದಲ್ಲಿದ್ದ ಮಹಿಳೆಯನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲದೇ ಆಕೆಯ ಪತಿ ಕೂಡ ಆಮ್ಲಜನಕದ ಕೊರತೆಯಿಂದ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. 7 ವರ್ಷದ ಮಗನನ್ನು ನೆರೆಹೊರೆಯವರು ನೋಡಿಕೊಳ್ಳುತ್ತಿದ್ದರು. ದುರದೃಷ್ಟವಶಾತ್ 15 ದಿನಗಳ ನಂತರ ನಿನ್ನೆ ಮಹಿಳೆ ಕೋವಿಡ್‌ಗೆ ಬಲಿಯಾಗಿದ್ದಾರೆ.
ಈ ಸಂದರ್ಭ ಮೃತರ ಅಂತ್ಯ ಸಂಸ್ಕಾರ ಮಾಡಲು ಯಾರೂ ಇಲ್ಲದ ಕಾರಣ ವಿಷಯ ತಿಳಿದ ನಾಗರಿಕ ರಕ್ಷಣಾ ತಂಡ ಮುಖ್ಯ ಕಮಾಂಡಿಂಗ್ ಅಧಿಕಾರಿ ಡಾ. ಪಿ.ಆರ್.ಎಸ್.ಚೇತನ್, ಎಂ.ನಾಗೇಂದ್ರನ್ ನೇತೃತ್ವದಲ್ಲಿ ಮತ್ತು ವಾರ್ಡ್ನ್ಗಳು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕುಟುಂಬದ ಪರವಾಗಿ ಮೃತದೇಹವನ್ನು ಆಸ್ಪತ್ರೆಯಿಂದ ಪಡೆದಿದ್ದಾರೆ. ಅಲ್ಲದೆ ಪತಿ ಮತ್ತು ಮಗುವನ್ನು ಶವಾಗಾರಕ್ಕೆ ಕೊಂಡೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ಬಳಿಕ ಸಿವಿಲ್ ಡಿಫೆನ್ಸ್ ತಂಡ ಮೃತ ಮಹಿಳೆಗೆ ಶಾಸ್ತ್ರೋಕ್ತವಾಗಿ ಶವ ಸಂಸ್ಕಾರ ನಡೆಸಿ, ಅಂತಿಮ ವಿಧಿ ವಿಧಾನಗಳನ್ನು ನೆರೆವೇರಿಸಿದ್ದಾರೆ. ಅಲ್ಲದೇ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಸಹಕರಿಸಿದ್ದಾರೆ. ಇದಕ್ಕೆ ಬಿಬಿಎಂಪಿಯ ಕೋವಿಡ್ ಮೃತಪಟ್ಟವರ ನಿರ್ವಹಣಾ ಕಾರ್ಯಪಡೆಯ ಸಹಾಯವನ್ನು ಸಹ ಪಡೆದಿದ್ದಾರೆ.
ಓದಿ: ಕಾರವಾರದಲ್ಲಿ ಮಹಿಳಾ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ: 14 ಮಂದಿಗೆ ಗಾಯ