ಬೆಂಗಳೂರು: ಇದುವರೆಗೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಇನ್ಮುಂದೆ ಕಾಲೇಜು ಶಿಕ್ಷಣ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಇನ್ಮುಂದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ ಆಯುಕ್ತರ ಹುದ್ದೆಯನ್ನು, ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೂ ವಿಸ್ತರಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಎರಡೂ ಇಲಾಖೆ ಸೇರಿಸಿ ಆಯುಕ್ತರ ಹುದ್ದೆಯನ್ನು ವಿಸ್ತರಿಸಿ, ಜವಾಬ್ದಾರಿ ನೀಡಿ ಉನ್ನತ ಶಿಕ್ಷಣದ ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಆದೇಶ ಹೊರಡಿಸಿದ್ದಾರೆ.

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಅನೇಕ ಸಿಬ್ಬಂದಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ, ಅನುದಾನ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದ ಭೂ ಸ್ವಾಧೀನ ಮತ್ತು ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದು. ಶಿಕ್ಷಣ ಸಂಸ್ಥೆಗಳಿಗೆ ಪೀಠೋಪಕರಣ, ಪ್ರಯೋಗಾಲಯ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊಂದಿದೆ.

ಹಾಗಾಗಿ, ಇನ್ಮುಂದೆ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ, ಸಿಬ್ಬಂದಿ ಜ್ಯೇಷ್ಠತೆ ಹಾಗೂ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ ನಿಯಮಗಳ ನಿರ್ವಹಣೆಯನ್ನು ಆಯುಕ್ತರಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.