ಬೆಂಗಳೂರು: ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಮತ್ತು ರಾಜ ಮಹರಾಜರ ಆಡಳಿತವಿತ್ತು. ರಾಜರು ಪ್ರಜೆಗಳನ್ನು ತಮ್ಮ ಮಕ್ಕಳತೆ ಕಾಣುತ್ತಿದ್ದರು. ಅದು ಬೇರೆಯವರ ಆಡಳಿತವಾದರೂ ಅಲ್ಲಿ ನ್ಯಾಯ ನಿಷ್ಠೆ ಇತ್ತು. ಕಂದಾಯ, ತೆರಿಗೆ, ಲೆಕ್ಕಾಚಾರ, ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಇತ್ತು. ಆ ಸಮಾಜವನ್ನು ಕಂಡ ನನಗೆ ಇಂದಿನ ಆಡಳಿತ ನೋಡಿದರೆ ದುಃಖವಾಗುತ್ತದೆ. ರಾಜಕಾರಣವೇ ಎಲ್ಲೆಡೆ ತುಂಬಿದೆ ಎಂದು ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಹುಲಿಕಲ್ ನಾಗಭೂಷಣ ಅವರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೇಸರ ಹೊರ ಹಾಕಿದರು.
ಆಜಾದಿ ಕಾ ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯ ಕಂಡು ಇಂದಿಗೆ 75 ವರ್ಷಗಳಾಗಿದೆ. ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅಮೃತ ಮಹೋತ್ಸದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆ ಬಾಗಿಲಿಗೇ ರಾಜ್ಯಪಾಲರು ತೆರಳಿ ಸನ್ಮಾನಿಸಿದ್ದಾರೆ.
ನನಗೂ ಆ ಗೌರವ ಸಂದಿರುವುದು ಸಂತಸ ತಂದಿದೆ ಎಂದು ಹೇಳಿದರು. 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಮ್ಮ ದೇಶದ ಆಡಳಿತ, ನಮ್ಮ ಬೆಳವಣಿಗೆ ಎಂಬ ಸಂತಸ ಒಂದೆಡೆಯಾದರೆ, ದೇಶದ ಅಭಿವೃದ್ಧಿ, ಯುವಜನರ ಮನಸ್ಥಿತಿ ಇನ್ನೊಂದೆಡೆ ವಾಲುತ್ತಿರುವ ಆತಂಕ ಕಾಡುತ್ತಿದೆ ಎಂದರು.
ಕ್ವಿಟ್ ಇಂಡಿಯಾ ಚಳವಳಿಯ ಪ್ರಭಾವ: ಸ್ವಾತಂತ್ರ್ಯ ಸಂಗ್ರಾಮ ಎಂದರೆ ಮೊದಲು ನನಗೆ ನೆನಪಿಗೆ ಬರುವುದು ಕ್ವಿಟ್ ಇಂಡಿಯಾ ಚಳವಳಿ. ನಾನು ತೀರ್ಥಹಳ್ಳಿಯ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಮುಂಬೈನಲ್ಲಿ ಗಾಂಧೀಜಿ ಅವರು ಕರೆ ನೀಡಿದ್ದ ಚಳವಳಿಯ ಸುದ್ದಿ ಎಲ್ಲೆಡೆ ಹಬ್ಬಿತ್ತು. ನಾನು ಹಾಗೂ ನನ್ನ ಸಹಪಾಠಿಗಳ ಮೇಲೆ ಪ್ರಭಾವ ಬೀರಿತ್ತು. ಸ್ವಾತಂತ್ರ್ಯಕ್ಕಾಗಿ ಕ್ಷಣಾರ್ಧವೂ ಯೋಚಿಸದಂತೆ ಹೋರಾಟಕ್ಕ ಇಳಿದೆ. ತೀರ್ಥಹಳ್ಳಿಯಲ್ಲಿ ಆರಂಭವಾದ ಹೋರಾಟ ಜೈಲಿನವರೆಗೆ ನನನ್ನು ತಲುಪಿತು ಎಂದು ಅಂದಿನ ದಿನಮಾನಗಳನ್ನು ನೆನೆದರು.
ಜೈಲು ವಾಸದಲ್ಲೂ ಹೆಮ್ಮೆ: ಶಾಲೆಯಲ್ಲಿದ್ದರೂ ಬ್ರಿಟಿಷರಿಗೆ ತೊಂದರೆ ನೀಡಬೇಕು ಎನ್ನುವ ಹುಚ್ಚು ಮನಸ್ಸಿತ್ತು. ಅದಕ್ಕಾಗಿ ಅವರ ಸಂಪರ್ಕ ಸಾಧನಾರಾಗಿದ್ದ ಟೆಲಿಗ್ರಾಮ್, ವಿದ್ಯುತ್ ವೈಯರ್‌ಗಳನ್ನು ಕಡಿತಗೊಳಿಸುತ್ತಿದ್ದೆವು. ನಮ್ಮ ಕಾಟ ತಡೆಯಲಾಗದೇ ಬ್ರಿಟಿಷರು ನಮ್ಮೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆ ಕಾಲದ ಜೈಲು ವಾಸದಲ್ಲೂ ಒಂದು ರೀತಿಯ ಹೆಮ್ಮೆ, ಸಂತೋಷ ಇತ್ತು. ಜೈಲಿನಲ್ಲಿದ್ದಾಗ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ ಇದ್ದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಹೋರಾಟಗಾರರನ್ನು ಗುರುತಿಸಿ ಗೌರವ: ಸರ್ಕಾರಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಗುರಿತಿಸಿ ಮನೆಬಾಗಿಲಿಗೆ ಬಂದು ಗೌರವಿಸುತ್ತಿರುವುದು ಒಂದು ಉತ್ತಮ ಕೆಲಸ. ಇದು ಒಂದು ರೀತಿಯಲ್ಲಿ ನನಗೆ ಸಂತೋಷ ನೀಡಿದೆ ಎಂದು ಹುಲಿಕಲ್ ನಾಗಭೂಷಣ ಅವರು ಸಂತಸ ವ್ಯಕ್ತಪಡಿಸಿದರು.
ಹುಲಿಕಲ್ ನಾಗಭೂಷಣ ಅವರ ವಿವರ: 1921ರ ಜುಲೈ 6ರಂದು ತೀರ್ಥಹಳ್ಳಿ ತಾಲೂಕಿನ ಹುಲಿಕಲ್‌ನಲ್ಲಿ ವೆಂಕಟರಮಣಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗೆ 10ನೇ ಹಾಗೂ ಕಡೆಯ ಮಗನಾಗಿ ನಾಗಭೂಷಣ ಜನಿಸಿದರು. ತಮ್ಮ 33ನೇ ವಯಸ್ಸಿಗೆ ನಿರ್ಮಲಾ ಅವರನ್ನು ವರಿಸಿದರು. ಇವರಿಗೆ ಮೂವರು ಮಕ್ಕಳಿದ್ದಾರೆ. 1965ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು.
ಇದನ್ನೂ ಓದಿ: ಸ್ವಾತಂತ್ರ್ಯದ ಹೋರಾಟದ ದಿನಗಳನ್ನು ನೆನೆದ ಶತಾಯುಷಿ ವೆಂಕಣ್ಣ ನಾಯಕ