ಬೆಂಗಳೂರು: ಕೇಂದ್ರ ಸರ್ಕಾರದ ಅನ್ನ ಯೋಜನೆ ಹಂಚಿಕೆಯಂತೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ನಾಳೆಯಿಂದ ವಿತರಿಸಲು ಪ್ರಾರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪಡಿತರ ಪ್ಯಾಕೇಜಿನಡಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ಸದಸ್ಯರಿಗೆ 2 ತಿಂಗಳ 10 ಕೆ.ಜಿ. ಉಚಿತ ಅಕ್ಕಿ, ಪ್ರತಿ ಕುಟುಂಬಕ್ಕೆ 1 ತಿಂಗಳಿನ ಉಚಿತ 1 ಕೆ.ಜಿ.ತೊಗರಿ ಬೇಳೆ ವಿತರಿಸಲಾಗುತ್ತದೆ. 19 ಜಿಲ್ಲೆಗಳಿಗೆ ನಾಳೆಯಿಂದ ಪಡಿತರ ವಿತರಣೆ ಮಾಡಲಾಗುತ್ತದೆ, ಉಳಿದ 12 ಜಿಲ್ಲೆಗಳಿಗೆ ಮೇ 3ರಿಂದ ಪಡಿತರ ವಿತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಕೊರೊನಾ ಹಿನ್ನೆಲೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ನೀಡುತ್ತಿದೆ. ಜೂನ್ ತಿಂಗಳಲ್ಲಿ ಕೇಂದ್ರದ ಐದು ಕೆ.ಜಿ ಅಕ್ಕಿ, 2 ಕೆ.ಜಿ ಬೇಳೆ ಮತ್ತು ರಾಜ್ಯ ಸರ್ಕಾರದ ಐದು ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಗೋಧಿ ವಿತರಿಸಲಾಗುತ್ತದೆ ಎಂದರು.
ಇನ್ನು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ 1,88,512 ಕುಟುಂಬ ವರ್ಗಕ್ಕೂ ಮೂರು ತಿಂಗಳು ಉಚಿತ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಎಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದ 61,233 ಫಲಾನುಭವಿಗಳಿಗೂ ಪ್ರತಿ ಕೆ.ಜಿಗೆ ರೂ.15ರಂತೆ 10 ಕೆ.ಜಿ ಅಕ್ಕಿ ವಿತರಿಲಾಗುತ್ತದೆ. ಪಡಿತರ ಪಡೆಯಲು ಬೆರಳಚ್ಚು ಬಯೋಮೆಟ್ರಿಕ್ ಅಥವಾ ಒಟಿಪಿ ದೃಢೀಕರಣ ಕಡ್ಡಾಯ ಎಂದು ತಿಳಿಸಿದರು.
ಪೋರ್ಟೆಬಿಲಿಟಿ ಯೋಜನೆ ಜಾರಿಯಿರುತ್ತದೆ. ಇದರಿಂದ ಯಾವುದೇ ಜಿಲ್ಲೆಯ ಹಾಗೂ ದೇಶದ ಯಾವುದೇ ರಾಜ್ಯಗಳ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ. ಆಹಾರ ಧಾನ್ಯ ವಿತರಣಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತೂಕದಲ್ಲಿ ಮೋಸ, ಇಲಾಖೆಯ ಪಡಿತರ ಬಿಟ್ಟು ಬೇರೆ ವಸ್ತುಗಳ ಪಡೆಯುವಂತೆ ಒತ್ತಾಯಿಸುವುದು, ಒಟಿಪಿ ಹೆಸರಲ್ಲಿ ಸೇವಾಶುಲ್ಕ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಭತ್ತ, ರಾಗಿ, ಬಿಳಿ ಜೋಳ ಮತ್ತು ರಬಿ ಜೋಳ ಖರೀದಿಯನ್ನು ಪ್ರಾರಂಭಿಸಿದೆ. ಭತ್ತ ಮತ್ತು ಬಿಳಿ ಜೋಳದ ಖರೀದಿ ಅವಧಿ ಮೇ 15ರ ತನಕ ಇರುತ್ತದೆ. ರಾಗಿ ಖರೀದಿ ಮೇ ಅಂತ್ಯದ ವರೆಗೆ ಇರಲಿದ್ದು, ರೈತರ ಇದರ ಅನುಕೂಲ ಪಡೆಯಬೇಕು ಎಂದರು.
ಇನ್ನು ಒಂದು ಲಕ್ಷ ಮೆಟ್ರಿಕ್ ಟನ್ ರಬಿ ಜೋಳವನ್ನೂ ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಈವರೆಗೆ ಅಕ್ರಮವಾಗಿ ಪಡಿತರ ಸಾಗಣೆ ಮಾಡುತ್ತಿದ್ದ 13 ವಾಹನಗಳನ್ನು ಜಪ್ತಿ ಮಾಡಿದ್ದು, 2,670 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಯಡಿ 25 ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ19 ಎಫ್ ಐಆರ್ ದಾಖಲಿಸಲಾಗಿದೆ ಎಂದರು. ಇನ್ನು ಅಕ್ರಮ ಎಸಗಿರುವ 153 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದರು.