ಬೆಂಗಳೂರು: ಅಸಾಂಕ್ರಾಮಿಕ ರೋಗಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ನಿರ್ವಹಣೆಗೆ ನಗರಗಳಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಶೇಕಡಾ 75ರಷ್ಟು ಮಧುಮೇಹಿಗಳು ಕಾಯಿಲೆಯ ಬಗ್ಗೆ ನಿರ್ಲಕ್ಷಿಸುತ್ತಿದ್ಧಾರೆ. ಇದರಿಂದ 30 ವರ್ಷ ಮೇಲ್ಪಟ್ಟವರಿಗೆ ಪರೀಕ್ಷಿಸಲು ಕ್ಷೇಮ ಕೇಂದ್ರಗಳನ್ನು ಪ್ರಾರಂಬಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.
30 ವರ್ಷ ವಯಸ್ಸಿನ ಮಧುಮೇಹಿಯೊಬ್ಬರು ಗ್ಯಾಂಗ್ರಿನ್‌ನಿಂದ ಕಾಲಿಗೆ ಹಾನಿ ಮಾಡಿಕೊಂಡಿದ್ದರು. ಆದರೆ ಅವರಿಗೆ ಮಧುಮೇಹ ಇದೆ ಎಂಬುದೇ ಗೊತ್ತಿರಲಿಲ್ಲ. ಇಂತಹ ನಿರ್ಲಕ್ಷ್ಯ, ಜಾಗೃತಿಯ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಪ್ರತಿ ವರ್ಷ ಆರೋಗ್ಯ ತಪಾಸಣೆಯನ್ನು ಕೂಡ ಜನರು ಮಾಡಿಕೊಳ್ಳುವುದಿಲ್ಲ. ಜನರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಶೇ 50ರಷ್ಟು ಜನರಿಗೆ ಆರೋಗ್ಯ ತಪಾಸಣೆ: ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಶೇ 50ರಷ್ಟು ಜನರನ್ನು ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಳಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ರಾಜ್ಯದ ಶೇ 100ರಷ್ಟು ಜನರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬುದು ನನ್ನ ಗುರಿ ಎಂದು ಸಚಿವರು ತಿಳಿಸಿದರು.
ಗರಿಷ್ಟ ವಯೋಮಿತಿ ಹೆಚ್ಚಳ: ಬೆಂಗಳೂರು ನಗರ ಐಟಿ ನಗರವಾಗಿದೆ. ಸದ್ಯ ಆರೋಗ್ಯ ನಗರವಾಗಿ ಬೆಳೆಯುತ್ತಿದೆ. ಕಳೆದ ಎರಡು ಮೂರು ದಶಕಕ್ಕೆ ಹೋಲಿಸಿದರೆ ಜನರ ಗರಿಷ್ಠ ವಯೋಮಿತಿ ಹೆಚ್ಚಾಗಿದೆ. ಈ ಹಿಂದೆ 40-52 ವಯೋಮಿತಿ ಇದ್ದು, ಈಗ 65-67 ಏರಿಕೆಯಾಗಿದೆ. ವಯೋಮಿತಿ ಹೆಚ್ಚಳದ ಮೂಲಕ ನಾವು ಅಭಿವೃದ್ಧಿ ಸಾಧಿಸಿದ್ದೇವೆ. ಆದರೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ಆರೋಗ್ಯಕರವಾಗಿ ಬದುಕುತ್ತೇವೆ ಎಂಬುದು ಮುಖ್ಯ ಎಂದರು.
ಮಧುಮೇಹ ಹೆಮ್ಮಾರಿಯಾಗಿ ಕಾಡುತ್ತಿದೆ: ವಾಸ್ತವದಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಅಸಾಂಕ್ರಾಮಿಕ ರೋಗಗಳೇ ಹೆಚ್ಚು ಸಮಾಜವನ್ನು ಕಾಡುತ್ತಿವೆ. ಅಭಿವೃದ್ಧಿಶೀಲ ಹಾಗೂ ಹಿಂದುಳಿದ ದೇಶಗಳಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚು ದುಷ್ಪರಿಣಾಮ ಬೀರುತ್ತಿವೆ. ಅದರಲ್ಲೂ ಭಾರತದಲ್ಲಿ ಮಧುಮೇಹ ಹೆಚ್ಚು ಜನರನ್ನು ಕಾಡುತ್ತಿದೆ.
ನರ್ಸಿಂಗ್ ಸಂಸ್ಥೆಗಳ ಪರಿಶೀಲನೆ: ರಾಜ್ಯದಲ್ಲಿ ಸುಮಾರು 850 ನರ್ಸಿಂಗ್ ಕಾಲೇಜುಗಳಿವೆ. ಸರ್ಕಾರದಿಂದ ಒಂದು ಸಮಿತಿ ರಚಿಸಿ ಈ ಎಲ್ಲಾ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಆ ಸಮಿತಿಯಿಂದ ವರದಿ ಪಡೆದು ಕ್ರಮ ವಹಿಸಲಾಗುವುದು ಎಂದು ಡಾ.ಸುಧಾಕರ್ ತಿಳಿಸಿದರು.
ಇದನ್ನೂಓದಿ: ಬ್ಲಾಕ್ ಟೀ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದು: ಅಧ್ಯಯನ