ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಮತ್ತು ಸುತ್ತಮುತ್ತಲಿನ ವಾರ್ಡ್‌ಗಳ ಬಡ ವರ್ಗದ ಮಕ್ಕಳ ಅನುಕೂಲಕ್ಕಾಗಿ ಪದವಿಪೂರ್ವ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ. ಈ ಕುರಿತು ಪಾಲಿಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬಿಬಿಎಂಪಿಯ ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದ ಹೆಚ್.ಇ.ಪಿ.ಎಸ್, ವಾಣಿಜ್ಯ ವಿಭಾಗದ ಹೆಚ್.ಇ.ಬಿ.ಎ, ಸಿ.ಇ.ಬಿ.ಎ, ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿ ಸಂಯೋಜನೆಗಳುಳ್ಳ ತರಗತಿಗಳಿಗೆ ಉಚಿತ ಪ್ರವೇಶಾತಿ ನೀಡಲಾಗುವುದು ಎಂದು ಹೇಳಿದೆ.
ಪಾಲಿಕೆವತಿಯಿಂದ ಉಚಿತ ಪಠ್ಯ-ಪುಸ್ತಕಗಳು, ಉಚಿತ ಸಮವಸ್ತ್ರ, ಸ್ವೇಟರ್, ಟ್ರಾಕ್ ಪ್ಯಾಂಟ್, ಬ್ಲೇಸರ್, ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ. ಉತ್ತಮ ಗ್ರಂಥಾಲಯ, ಇ-ಲೈಬ್ರರಿ, ಪ್ರಯೋಗಾಲಯಗಳ ವ್ಯವಸ್ಥೆಯ ಜೊತೆಗೆ ಉಚಿತ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳಿಗೆ ಇರಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ, ಟ್ಯಾಲಿ ಕಲಿಕೆಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.
35 ಸಾವಿರ ಪ್ರೋತ್ಸಾಹಧನ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಪ್ರೋತ್ಸಾಹಧನ. ಎಸ್.ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆಯಿಂದ ವಿಶೇಷ ವಿದ್ಯಾರ್ಥಿವೇತನ ದೊರೆಯಲಿದೆ ಎಂದು ಮಾಹಿತಿ ನೀಡಿದೆ.
ಉತ್ತಮ ಮೂಲ ಸೌಕರ್ಯಗಳು: ಉತ್ತಮ ಮೂಲಸವಲತ್ತು ನೀಡಲು ನುರಿತ ಉಪನ್ಯಾಸಕರಿಂದ ಬೋಧನೆ, ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ಕೊಠಡಿಗಳಲ್ಲಿ ಸ್ಮಾರ್ಟ್ ಬೋರ್ಡ್, ಉಚಿತ ಗಣಕಯಂತ್ರ ತರಬೇತಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಜೊತೆಗೆ ಇಸ್ಕಾನ್ ವತಿಯಿಂದ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರಲಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ.. 11 ಜನರ ಸಜೀವ ದಹನ