ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಭರತ್ ಮೋಸ ಹೋದ ಯುವಕ. ಈತ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಲು ಪ್ರಯತ್ನಿಸುತ್ತಿದ್ದ. ಈ ವೇಳೆ ಸ್ನೇಹಿತ ಹಿತೇಶ್ ಮುಖಾಂತರ ಕಲ್ಯಾಣ್ ಚಕ್ರವರ್ತಿ ಎಂಬಾತ ಪರಿಚಯವಾಗಿದ್ದ. ಹೀಗೆ ಪರಿಚಯ ಮಾಡಿಕೊಂಡವನು, ರೈಲ್ವೆ ಅಧಿಕಾರಿಗಳು ನನಗೆ ಗೊತ್ತು, ನಿಮಗೆ ಕೆಲಸ ಕೊಡಿಸುತ್ತೇನೆ. ಆದರೆ ಇದು ಸರ್ಕಾರಿ ಕೆಲಸವಾದ್ದರಿಂದ ಸ್ವಲ್ಪ ಖರ್ಚಾಗುತ್ತದೆ. ನೀವು 75 ಲಕ್ಷ ಕೊಟ್ಟರೆ ಜೀವನಪರ್ಯಂತ ಆರಾಮಾಗಿ ಇರಬಹುದು ಎಂದು ನಂಬಿಸಿದ್ದನಂತೆ.
ಕಲ್ಯಾಣ್ ಮೂರ್ತಿ ಮಾತು ನಂಬಿದ್ದ ಭರತ್, ಹಂತ ಹಂತವಾಗಿ ಆತನಿಗೆ ಹಣ ನೀಡಿದ್ದ. ಹಣ ಪಡೆದುಕೊಂಡ ಕಲ್ಯಾಣ್ ಮೂರ್ತಿ ಇದೀಗ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ನೇಹಿತ ಹಿತೇಶ್ಗೆ ತಿಳಿಸಿದರೆ, ನಿನ್ನ ಹಣವನ್ನು ಪಾಪಸ್ ಕೊಡಿಸುತ್ತೇನೆ. ಚಿಂತೆ ಮಾಡ್ಬೇಡ ಎಂದು ಹೇಳಿ ಆತ ಕೂಡ ಮೋಸ ಮಾಡಿದ್ದಾನಂತೆ. ತಾನು ಮೋಸ ಹೋಗಿರುವುದನ್ನು ತಿಳಿದ ಭರತ್, ವೈಟ್ ಫೀಲ್ಡ್ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.