ಬೆಂಗಳೂರು: ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್‌ಗಳ ವಸತಿ ಸಮುಚ್ಛಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು. ಆದರೆ, ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್‌ಗಳು ಕಟ್ಟಡದ ಮಾಲೀಕರಿಗೆ ಹಲ್ಲೆ ನಡೆಸಿದ್ದಾರೆ.
ಕಟ್ಟಡ ಮಾಲೀಕ ರಾಘವೇಂದ್ರರಿಗೆ ನೆಸ್ಟ್ ಅವೇ ಕಂಪನಿ ಈವರೆಗೆ 47 ಲಕ್ಷ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪನಿ ಪರ ವಕೀಲ ಅನ್ಷುಲ್ ಮಿತ್ತಲ್‌ರು ವಾದಿಸಿದ್ದಾರೆ.
ಈ ಕುರಿತು ಹೆಚ್ಎಸ್‌ಆರ್‌ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು, ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.