ಬೆಂಗಳೂರು : ಸರ್ಕಾರಿ ನೌಕರರಿಗೆ ಎರಡನೇ ಶನಿವಾರದ ಜೊತೆಗೆ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ, ಆರನೇ ವೇತನ ಆಯೋಗದ ಶಿಫಾರಸು ಆಧರಿಸಿ ತಿಂಗಳ ನಾಲ್ಕನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ನೀಡಲು ಘೋಷಿಸಲಾಗಿದೆ ಎಂದರು.
ಕರ್ನಾಟಕ ಹೊರತುಪಡಿಸಿದಂತೆ 17 ರಾಜ್ಯಗಳಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಈ ನಿಯಮ ಜಾರಿಗೆ ತರಲಾಗುವುದು. ಇದು ಎಲ್ಲಾ ಸರ್ಕಾರಿ ಕಚೇರಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅನೇಕ ಜಯಂತಿಗಳ ಸಂಬಂಧ ಸರ್ಕಾರಿ ನೌಕರರಿಗೆ ರಜೆ ನೀಡಲಾಗುತ್ತಿದೆ. ಸಾರ್ವತ್ರಿಕ ರಜೆಗಳಿಗಿಂತ ಈ ಜಯಂತಿಗಳಿಗೆ ಅಧಿಕ ರಜೆ ಇರುವ ಹಿನ್ನೆಲೆಯಲ್ಲಿ ನಾಲ್ಕನೇ ಶನಿವಾರದ ರಜೆಯನ್ನು ಕಡಿತಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇತ್ತು. ಆರನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲನೆಗೆ ಕೃಷ್ಣಬೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.