ಬೆಂಗಳೂರು: ಕೊರೊನಾ ಸೋಂಕಿನ ನಡುವೆ ಆರ್ಬಿಐ ಹೆಸರು ಹೇಳಿಕೊಂಡು ಹಳೆ ನೋಟಿನ ಎಕ್ಸ್ಚೇಂಜ್ ವ್ಯವಹಾರ ಎಗ್ಗಿಲದೇ ನಡೆಯುತ್ತಿದ್ದು ಸದ್ಯ ಉತ್ತರ ವಿಭಾಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನೇಶ್, ರಾಸಿಕ್, ಎಸ್ ನಾಗರಾಜ, ಕೃಷ್ಣಮೂರ್ತಿ ಬಂಧಿತರು. ಈ ಆರೋಪಿಗಳು ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆ.ರ್.ಟಿ.ಓ ಕಚೇರಿ ಪಾರ್ಕಿಂಗ್ ಹತ್ತಿರ ನಿಷೇಧಿಸಿರುವ ಐನೂರು, ಸಾವಿರ ಮುಖ ಬೆಲೆಯ ಹಳೆ ನೋಟುಗಳನ್ನು ಸಾರ್ವಜನಿಕರಿಗೆ ಕಮಿಷನ್ಗಾಗಿ ಚಲಾವಣೆ ಮಾಡುತ್ತಿದ್ದರು. ಹಳೆ ನೋಟನ್ನು ಆರ್ಬಿಐ ಮುಖಾಂತರ ಬದಲಾವಣೆ ಮಾಡಿದರೆ ಹೆಚ್ಚು ಹಣ ಸಿಗುತ್ತದೆ ಎಂದು ನಕಲಿ ಆರ್ ಬಿಐ ಅಧಿಕಾರಿಗಳಾಗಿ ನಟಿಸಿ ನಂಬಿಸುತ್ತಿದ್ದರು.
ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾತನಾಡಿ, ಹಣ ಎಕ್ಸ್ಚೇಂಜ್ ಮಾಡುವುದಾಗಿ ಸಾರ್ವಜನಿಕರನ್ನು ನಂಬಿಸಿ ನಿಷೇಧಿತ ನೋಟುಗಳನ್ನು ಮಾರಾಟ ಮಾಡುತ್ತಿದ್ದರು. ಈ ಆರೋಪಿಗಳು ಬ್ಯಾಂಕ್ ಸಿಬ್ಬಂದಿಗೂ ಸಹ ಮೋಸ ಮಾಡಿದ್ದಾರೆ. ಸದ್ಯ ಯಶವಂತಪುರ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ ಎಂದರು.