ಬೆಂಗಳೂರು: ಕಾಂಗ್ರೆಸ್ನಲ್ಲಿ ಮತ್ತೆ ಪತ್ರ ಸಮರ ಪ್ರಾರಂಭವಾಗಿದೆ. ಈ ಬಾರಿ ವಿಧಾನ ಪರಿಷತ್ ನಾಮನಿರ್ದೇಶನ ವಿಚಾರದಲ್ಲಿ ಜಟಾಪಟಿ ಶುರುವಾಗಿದ್ದು, ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ಎಐಸಿಸಿ ಅಧ್ಯಕ್ಷರಿಗೆ ನಾಲ್ವರು ಸಚಿವರು ಪತ್ರ ಬರೆದಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ ಹಾಗು ಆರ್.ಬಿ.ತಿಮ್ಮಾಪುರ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಸುಧಾಮ್ ದಾಸ್ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಯಾಗಿ ಇದ್ದವರು. ಕೆಲ ವರ್ಷಗಳ ಹಿಂದೆ ಏಕಾಏಕಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 2023ಕ್ಕೆ ಮಾಹಿತಿ ಆಯುಕ್ತರ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದಾರೆ. 2023ರಲ್ಲಿ ಕಾಂಗ್ರೆಸ್ ಪಾರ್ಟಿ ಸೇರಿದ್ದಾರೆ. ಹೀಗಾಗಿ ಇವರನ್ನು ಪರಿಷತ್ ನಾಮನಿರ್ದೇಶನಕ್ಕೆ ಪರಿಗಣಿಸಬೇಡಿ. ಮೇಲ್ಮನೆಗೆ ನಾಮರ್ನಿರ್ದೇಶನ ಹೆಸರು ಅಂತಿಮಗೊಳಿಸುವ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಈವರೆಗೆ ರಾಜ್ಯ ನಾಯಕರಾಗಲಿ, ಹೈಕಮಾಂಡ್ ಆಗಲಿ ಈ ಸಂಬಂಧ ನಮ್ಮ ಬಳಿ ಚರ್ಚೆ ನಡೆಸಿಲ್ಲ. ನಮಗೆ ಬಹಳ ಬೇಜಾರಾಗಿದೆ ಎಂದು ತಿಳಿಸಿದ್ದಾರೆ.
ನಾಮನಿರ್ದೇಶಿತ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯವನ್ನು ಅನುಸರಿಸಬೇಕು. ಅಚ್ಚರಿಯ ಕಾರಣಕ್ಕಾಗಿ ಸುಧಾಮ್ ದಾಸ್ ಕೆಲವು ವರ್ಷಗಳ ಹಿಂದೆ ಜಾರಿ ನಿರ್ದೇಶನಾಲಯದಿಂದ (ಇಡಿ) ರಾಜೀನಾಮೆ ನೀಡಿದ್ದರು. ಬಳಿಕ ಕರ್ನಾಟಕ ಮಾಹಿತಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಮಾರ್ಚ್ 2023ಗೆ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಪಕ್ಷ ಸೇರಿಸುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅವರ ಕೊಡುಗೆ ಏನೂ ಇಲ್ಲ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾವು ಇಂಥ ವ್ಯಕ್ತಿ ಮೇಲ್ಮನೆ ನಾಮನಿರ್ದೇಶಿತರಾಗುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹಾಗಾಗಿ ಅವರ ಹೆಸರನ್ನು ಕೈ ಬಿಡಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ. ಕಾಂಗ್ರೆಸ್ಗೆ ನಿಷ್ಠರಾಗಿರುವ ಹಾಗೂ ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿರುವವರನ್ನು ಆಯ್ಕೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸುಧಾಮ್ ದಾಸ್ ವಿರುದ್ಧ ಪತ್ರ ವಿಚಾರವಾಗಿ ಮಾತನಾಡಿದ ಕೆ.ಹೆಚ್.ಮುನಿಯಪ್ಪ, "ಪತ್ರ ಬರೆದಿರುವುದು ಹೌದು. ಸುಧಾಮ್ ದಾಸ್ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 30 ವರ್ಷ ಕೆಲಸ ಮಾಡಿರುವವರಿಗೆ ಜವಾಬ್ದಾರಿ ಕೊಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾವ್ದಾರಿ ನಾಯಕರಾಗಿ ಕೆಲಸ ಮಾಡಿದವವರಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ, ನ್ಯಾಯಾಲಯ ಆದೇಶ ಪಾಲಿಸಿದ್ದೇವೆ: ಡಿಸಿಎಂ ಡಿಕೆಶಿ