ಬೆಂಗಳೂರು : 4 ಕೋಟಿಗೂ ಅಧಿಕ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಅನ್ನು ಆಗ್ನೇಯ ವಿಭಾಗದ ಮೈಕೋಲೇಔಟ್ ಪೊಲೀಸರು ವಶಪಡಿಸಿಕೊಂಡು, ಮೂವರು ತಮಿಳುನಾಡು ಮೂಲದ ಆರೋಪಿಗಳನ್ನ ಬಂಧಿಸಿದ್ದಾರೆ.
ಪನ್ನೀರ್ ಸೆಲ್ವಂ, ಆನಂದ ಶೇಖರ್ ಹಾಗೂ ಕೆ.ಮಂಜು ಬಂಧಿತ ಆರೋಪಿಗಳು. ಡಿಸೆಂಬರ್ 22ರಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಮೂವರು ಆರೋಪಿಗಳು ನಗರದ ಸೋಮೇಶ್ವರ ಕಾಲೋನಿಯ ಶೇಕ್ ರಸ್ತೆಯಲ್ಲಿ ಸಮುದ್ರದ ವನ್ಯಜೀವಿಗಳಿಗೆ ಸೇರಿದ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಆಧರಿಸಿ, ಮೈಕೋಲೇಔಟ್ ಪೊಲೀಸರ ಕಾರ್ಯಾಚರಣೆ ನಡೆಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ 4 ಕೆಜಿ 100 ಗ್ರಾಂ ತೂಕದ ಅಂಬರ್ ಗ್ರೀಸ್ ಹಾಗೂ ಅದನ್ನು ಸಾಗಾಣಿಕೆ ಮಾಡಲು ಬಳಸಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡಿನಿಂದ ಅಂಬರ್ ಗ್ರೀಸ್ ಅನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಮೈಕೋಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರತಿ ಕೆಜಿಗೆ ಒಂದು ಕೋಟಿ ಮೌಲ್ಯ : ಸಮುದ್ರದಲ್ಲಿ ದೊರೆಯುವ ಈ ಅಂಬರ್ ಗ್ರೀಸ್, ಸುಗಂಧ ದ್ರವ್ಯ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇದು ನಿಷೇಧಿತ ವಸ್ತುವಾಗಿದ್ದು, ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಸರಿಸುಮಾರು ಪ್ರತಿ ಕೆಜಿಗೆ ಒಂದು ಕೋಟಿಗೂ ಅಧಿಕ ಮೌಲ್ಯ ಅಂಬರ್ ಗ್ರೀಸ್‌ಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.